ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯರು, ಸ್ಟಾಪ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಪಿಜಿ ವಿದ್ಯಾರ್ಥಿಗಳು ಸೇರಿದಂತೆ 19 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಆಸ್ಪತ್ರೆಗೆ ಸೋಂಕು ನಿವಾರಕ ಔಷಧ ಸಿಂಪಡಣೆ ಮಾಡಲಾಯಿತು.
20 ಮಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, 60 ಜನರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಲಾಗಿದೆ. ವಿಮ್ಸ್ನ ಆರೋಗ್ಯ ಸೇವೆ ಪಡೆಯಲು ಆಗಮಿಸುತ್ತಿರುವ ತೀವ್ರ ಉಸಿರಾಟದ ಸಮಸ್ಯೆ, ಲಘು ಶೀತ, ಜ್ವರ (ಐಎಲ್‌ಐ) ಇರುವವರ ಮೂಲಕ ಆರೋಗ್ಯ ಸಿಬ್ಬಂದಿಗೆ ಸೋಂಕು ಹರಡಿದೆ ಎಂದು ವಿಮ್ಸ್ ನಿರ್ದೇಶಕ ಡಾ. ದೇವಾನಂದ ತಿಳಿಸಿದ್ದಾರೆ.
ಜು. 10ರೊಳಗೆ ಟ್ರುಮಾ ಕೇರ್ ರೆಡಿ ಮಾಡಿ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಸಿಗೆಗಳ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಟ್ರುಮಾ ಕೇರ್ ಸೆಂಟರ್‌ನಲ್ಲಿ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಜು. 10ರೊಳಗೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದರು.