ಚಿಕ್ಕೋಡಿ (ಬೆಳಗಾವಿ): ಶೌಚಾಲಯ ನಿರ್ಮಿಸುವ ವಿಚಾರದಲ್ಲಿ ತಮ್ಮನೇ ಅಣ್ಣನನ್ನು ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ಘಟನೆ ನಡೆದಿದೆ. ಭರಮು ಶಿವಾಜಿ ಕೋಳಿ (30) ಕೊಲೆಯಾದ ವ್ಯಕ್ತಿಯಾಗಿದ್ದು, ಬಂಡು ಶಿವಾಜಿ ಕೋಳಿ (28) ಕೊಲೆ ಮಾಡಿದ ಆರೋಪಿ. ಭರಮು ಕೋಳಿ ಶೌಚಾಲಯ ಕಟ್ಟಲು ಗುಂಡಿ ಅಗೆದಿದ್ದ. ಗುಂಡಿಯಲ್ಲಿನ ನೀರು ತಮ್ಮನಾದ ಬಂಡು ಕೋಳಿಯ ಮನೆಯ ಹತ್ತಿರ ಹೋಗುತ್ತಿತ್ತು.
ಇದರಿಂದ ನನ್ನ ಮನೆಯ ಹತ್ತಿರ ನೀರು ಯಾಕೆ ಬಿಡುತ್ತಿದ್ದೀಯಾ ಎಂದು ಪ್ರಾರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಘಟನೆ ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದ್ದು, ಕೊಲೆ ಮಾಡಿದ ನಂತರ ಆರೋಪಿ ಬಂಡು ಸದಲಗಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.