ಬೆಳಗಾವಿ: ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಧ್ವಜಸ್ತಂಭ ನೆಡುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಪ್ರಜ್ವಲ್ ಚನಗೌಡ ಮುನೇಪ್ಪನವರ(18) ಮೃತ ಯುವಕ.
ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಗ್ರಾಮದ ಬಸ್ ನಿಲ್ದಾಣದ ಮುಂದೆ ಧ್ವಜಸ್ತಂಭ ನಿರ್ಮಿಸಿ ನವೆಂಬರ್ 1ರಂದು ಧ್ವಜಾರೋಹಣಕ್ಕೆ ಗ್ರಾಮದ ಯುವಕರು ಸಿದ್ಧತೆ ನಡೆಸಿದ್ದರು. ಶನಿವಾರ ಸಂಜೆ ಧ್ವಜಸ್ತಂಭ ನೆಡುವಾಗ ಅಲ್ಲಿಯೇ ಹಾದು ಹೋಗಿದ್ದ ಸರ್ವೀಸ್ ವಿದ್ಯುತ್ ತಂತಿಗೆ ಧ್ವಜಸ್ತಂಭ ತಾಗಿದೆ. ಇದರಿಂದಾಗಿ ಕಂಬ ಹಿಡಿದಿದ್ದ ಪ್ರಜ್ವಲ್ಗೆ ವಿದ್ಯುತ್ ಪ್ರವಹಿಸಿದೆ. ಕೂಡಲೇ ಬೈಲಹೊಂಗಲ ತಾಲೂಕಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಮನೆ ಮಗನನ್ನು ಕಳೆದುಕೊಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದ್ದ ಒಬ್ಬ ಗಂಡು ಮಗನ ಬಗ್ಗೆ ಕನಸು ಕಟ್ಟಿಕೊಂಡಿದ್ದ ತಂದೆ-ತಾಯಿಗೆ ಬರಸಿಡಿಲು ಬಡಿದಂತಾಗಿದೆ. ಇತ್ತೀಚೆಗಷ್ಟೇ ಅಗ್ನಿವೀರ್ ಪರೀಕ್ಷೆ ಪಾಸ್ ಆಗಿದ್ದ ಪ್ರಜ್ವಲ್, ದೈಹಿಕ ಪರೀಕ್ಷೆಗೆ ತಯಾರಾಗುತ್ತಿದ್ದರು. ಅಷ್ಟರೊಳಗೆ ಅವಘಡ ಸಂಭವಿಸಿದೆ.
ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೈಲಹೊಂಗಲ ತಾಲೂಕಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಇಂದು (ಭಾನುವಾರ) ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಕೋರಮಂಗಲದಲ್ಲಿ ಅಗ್ನಿ ಅವಘಡ : ರೆಸ್ಟೋರೆಂಟ್ ಸುಟ್ಟು ಕರಕಲು.. ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಯುವಕ