ಬೆಳಗಾವಿ: ಸಚಿವ ಮುರುಗೇಶ್ ನಿರಾಣಿ ನನ್ನ ಮುಂದೆ ಬಚ್ಚಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಸುವರ್ಣಸೌಧದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷ ಕಟ್ಟುವಾಗ ಟಿಕೆಟ್ ಬೇಕು ಎಂದು ಆತ ನಮಗೆ ಬರುತ್ತಿದ್ದ. ಇವತ್ತು ಹಿಂದೂ ಸ್ವಾಮೀಜಿಗಳ ಬಗ್ಗೆ ಮಾತನಾಡಬಾರದು ಎಂದು ಹೇಳುತ್ತಿರುವ ನಿರಾಣಿ, ಈ ಹಿಂದೆ ವಾಟ್ಸಪ್ ಮೆಸೇಜ್ನಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನ ಮಾಡಿದ್ದರು ಎಂದು ತಿರುಗೇಟು ನೀಡಿದರು.
ನಿರಾಣಿಯನ್ನು ಸಚಿವರನ್ನಾಗಿ ಮಾಡಿದ್ದು ದುರ್ದೈವ. ಅವರು ಹೇಗೆ ಸಚಿವ ಆದರು, ಏನೆಲ್ಲಾ ಪ್ರಲಾಪ ಮಾಡಿದರು ಎಂದು ಗೊತ್ತಿದೆ. ನಿರಾಣಿ ಅವರನ್ನು ಸಿಎಂ ಮಾಡಿದ್ರೆ ವಿಧಾನಸೌಧ ಮರ್ಯಾದೆ ಹೋಗುತ್ತೆ ಎಂದು ಇದೇ ವೇಳೆ ಕಿಡಿಕಾರಿದರು.
ಯತ್ನಾಳ್ ಅವರು ಕೇಂದ್ರ ಸಚಿವರಾಗಲು ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಪಾತ್ರ ದೊಡ್ಡದಿದೆ. ಅವರ ಬಾಯಿಂದ ಬರುವ ಶಬ್ದ ಅವರ ವ್ಯಕ್ತಿತ್ವ ತೋರಿಸುತ್ತಿದೆ. ಹೋರಾಟ ಮಾಡುವುದು ತಪ್ಪಲ್ಲ, ಮತ್ತೊಬ್ಬರ ವಿರುದ್ಧ ಹೀಗೆ ಮಾತನಾಡುವುದು ತಪ್ಪು ಎಂಬ ನಿರಾಣಿ ಹೇಳಿಕೆಗೆ ಟೀಕಿಸಿದ ಅವರು, ನಾನು ಕೇಂದ್ರ ಸಚಿವನಾಗಲು ಅನಂತ್ ಕುಮಾರ್, ಪ್ರಮೋದ್ ಮಹಾಜನ್ ಕಾರಣ. ಯಡಿಯೂರಪ್ಪ ಪಾತ್ರ ಏನೂ ಇಲ್ಲ. ಯಡಿಯೂರಪ್ಪ ಮತ್ತೆ ಪುನರ್ಜನ್ಮ ಆಗಿದ್ದು ನಾನು ಸಚಿವನಾದ ಬಳಿಕ ಎಂದರು.
ಜಿಲ್ಲೆಗೊಂದು ವಿವಿ ಬೇಡ: ಪ್ರತಾಪ್ ಸಿಂಹ ವಿಶ್ವವಿದ್ಯಾಲಯ ಅಕ್ರಮ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಹೆಚ್ಚು ವಿಶ್ವವಿದ್ಯಾಲಯ ಏಕೆ ಮಾಡುತ್ತಾರೆ ಅರ್ಥ ಆಗುತ್ತಿಲ್ಲ. ವೈಸ್ ಚಾನ್ಸಲರ್ ಮಾಡಿ ಹಣ ತೆಗೆದುಕೊಳ್ಳುವುದು. ಕಟ್ಟಡ ಕಟ್ಟುವುದು, ಕಂಪ್ಯೂಟರ್ ತೆಗೆದುಕೊಳ್ಳುವುದು ಮಾಡುತ್ತಿದ್ದಾರೆ. ಇದರ ಹಣ ಎಲ್ಲರಿಗೂ ಹೋಗ್ತಿದೆ. ಕುಲಪತಿ ಹುದ್ದೆ ಹಾಗೇ ಆಗಿದೆ. ಇದ್ದ ವಿಶ್ವವಿದ್ಯಾಲಯಗಳನ್ನು ಅಭಿವೃದ್ಧಿ ಮಾಡುವುದು ಬಿಟ್ಟು ಈ ರೀತಿ ಮಾಡುತ್ತಿದ್ದಾರೆ. ಈಗಿರುವ ವಿಶ್ವವಿದ್ಯಾಲಗಳನ್ನು ಉನ್ನತೀಕರಿಸಲಿ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಬದಲು, ಗುಣಮಟ್ಟದ ಶಿಕ್ಷಣ ನೀಡಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ನಾಳೆ ಪಂಚಮಸಾಲಿ ಮೀಸಲಾತಿ ಬಗ್ಗೆ ಸಿಎಂ ಐತಿಹಾಸಿಕ ಘೋಷಣೆ: ಯತ್ನಾಳ್