ಬೆಳಗಾವಿ: ಚನ್ನಮ್ಮನ ಕಿತ್ತೂರು ಉತ್ಸವದಲ್ಲಿ ಆಯೋಜಿಸಿರುವ ಕುಸ್ತಿ ಪಂದ್ಯಾವಳಿ ಕಣ್ಮನ ಸೆಳೆಯಿತು. ರಾಜ್ಯ, ಹೊರ ರಾಜ್ಯ, ಹೊರ ದೇಶಗಳ ಕುಸ್ತಿಪಟುಗಳು ತಮ್ಮ ಪಟ್ಟುಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದ ಜನರು ಶಿಳ್ಳೆ, ಚಪ್ಪಾಳೆಗಳ ಮೂಲಕ ಪೈಲ್ವಾನರನ್ನು ಹುರಿದುಂಬಿಸಿದರು.
ಪಟ್ಟಣದ ಕೆಇಬಿ ಗ್ರಿಡ್ ಮೈದಾನದಲ್ಲಿ ಆಯೋಜಿಸಿದ್ದ ಪುರುಷರ ಹಾಗೂ ಮಹಿಳೆಯರ ಅಂತರರಾಷ್ಟ್ರೀಯ ಜಂಘೀ ನಿಖಾಲಿ ಕುಸ್ತಿ ಪಂದ್ಯಾವಳಿಯಲ್ಲಿ ರಾಷ್ಟ್ರಮಟ್ಟದ ವಿಭಾಗದಲ್ಲಿ ಹರಿಯಾಣ ರಾಜ್ಯದ ಉಮೇಶ ಚೌಧರಿ ಮಥುರಾ ವಿರುದ್ಧ ಇರಾನ್ ದೇಶದ ಪೈಲ್ವಾನ್ ಅಹ್ಮದ್ ಮಿರ್ಜಾ ಗೆಲುವು ಸಾಧಿಸಿದರು. ಮತ್ತೊಬ್ಬ ಇರಾನ್ ದೇಶದ ವಿಶ್ವ ಕುಸ್ತಿ ಪದಕ ವಿಜೇತ ರಿಜಾ ವಿರುದ್ಧ ರಾಣೆಬೆನ್ನೂರಿನ ಕರ್ನಾಟಕ ಕೇಸರಿ ಖ್ಯಾತಿಯ ಕಾರ್ತಿಕ ಕಾಟೆ ಜಯಶಾಲಿಯಾದರು. ಅದೇ ರೀತಿ ಮುಧೋಳದ ಸುನೀಲ ಪಡತರೆ ಅವರ ವಿರುದ್ಧ ದೆಹಲಿಯ ಅಮಿತ್ ಕುಮಾರ ಗೆದ್ದರು.
ಜಮಖಂಡಿಯ ಶಿವಯ್ಯ ಪೂಜಾರಿ ಮತ್ತು ಇಂಗಳಗಿಯ ಶಿವಾನಂದ ದಡ್ಡಿ ನಡುವೆ ಸಮಬಲ ಪ್ರದರ್ಶನ ಏರ್ಪಟ್ಟು ಫಲಿತಾಂಶ ಡ್ರಾ ಆಯಿತು. ಬಸಿಡೋಣಿಯ ನಾಗರಾಜ, ಸಾಂಗ್ಲಿಯ ವಾಸೀಮ್ ಪಠಾಣ ಪಂದ್ಯವೂ ಸಮಬಲದ ಫಲಿತಾಂಶದಲ್ಲಿ ಅಂತ್ಯವಾಯಿತು. ಈ ನಾಲ್ವರು ಪೈಲ್ವಾನರು ಒಬ್ಬರಿಗೊಬ್ಬರು ಪಟ್ಟು ಸಡಿಲಿಸದೇ ಅಖಾಡದಲ್ಲಿ ಸೆಣಸಿದರು.
ಮಹಿಳೆಯರ ವಿಭಾಗದಲ್ಲಿ ಹರಿಯಾಣದ ಇಷಾ ಪುನೀಯಾ ಅವರನ್ನು ಮಹಾರಾಷ್ಟ್ರದ ಅಪೇಕ್ಷಾ ಪಾಟೀಲ ಸೆಣಸಾಡಿ ಸೋಲಿಸಿದರು. ಹಳಿಯಾಳದ ವಿದ್ಯಾಶ್ರೀ ಗೆನೆನ್ನವರ ವಿರುದ್ಧ ಖಾನಾಪುರದ ರುತುಜಾ ಗುರವ್ ಗಣೆಬೈಲ್ ಗೆಲುವು ಸಾಧಿಸಿದರು. ಕಂಗ್ರಾಳಿಯ ಭಕ್ತಿ ಪಾಟೀಲ ವಿರುದ್ಧ ಧಾರವಾಡದ ಕಾವ್ಯಾ ದಾನೆನ್ನವರ ವಿಜಯಶಾಲಿಯಾದರು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಾಬಾಸಾಹೇಬ ಪಾಟೀಲ ಕುಸ್ತಿ ಪಂದ್ಯಾವಳಿ ವೀಕ್ಷಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು. ಚಿಕ್ಕ ಮಕ್ಕಳು, ಮಹಿಳೆಯರು, ಹಿರಿಯರು ಕುಸ್ತಿ ಕಣ್ತುಂಬಿಕೊಂಡರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಮೈಸೂರು ದಸರಾಗೆ 200 ವರ್ಷಗಳ ಇತಿಹಾಸವಿದ್ದರೆ, ನಮ್ಮ ಕಿತ್ತೂರು ಉತ್ಸವಕ್ಕೆ 25 ವರ್ಷಗಳ ಇತಿಹಾಸವಿದೆ. ಈಗ ಅದೇ ಮಾದರಿಯಲ್ಲಿ ನಮ್ಮದ ಉತ್ಸವವೂ ಬೆಳೆಯುತ್ತಿದೆ. ಆದರೆ, ಇನ್ನೂ ಸಮಯ ಬೇಕಾಗುತ್ತದೆ. ಕಿತ್ತೂರಿನಲ್ಲಿ ಕುಸ್ತಿಗೆ ಸಾಕಷ್ಟು ಪ್ರೋತ್ಸಾಹ ಇರುವ ಹಿನ್ನೆಲೆಯಲ್ಲಿ ಪ್ರತಿವರ್ಷ ಆಯೋಜಿಸುತ್ತಿದ್ದೇವೆ. ಮುಂದಿನ ವರ್ಷ 200ನೇ ವಿಜಯೋತ್ಸವ ನಿಮಿತ್ತ ಇನ್ನೂ ದೊಡ್ಡ ಮಟ್ಟದಲ್ಲಿ ಕುಸ್ತಿ ನಡೆಸುವುದಾಗಿ ಭರವಸೆ ನೀಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ನಮ್ಮ ಬೈಲಹೊಂಗಲ ಮತ್ತು ಕಿತ್ತೂರು ಮಂದಿ ಕುಸ್ತಿಪ್ರಿಯರು. ಇಲ್ಲಿ ಆಟ ಆಡುವವರಿಗಿಂತ ನೋಡುವ ಮತ್ತು ಪ್ರೋತ್ಸಾಹಿಸುವ ಜನ ಹೆಚ್ಚಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಪೈಲ್ವಾನರು ಕುಸ್ತಿಯಲ್ಲಿ ಭಾಗಿಯಾಗಿದ್ದು, ಈ ಬಾರಿಯ ವಿಶೇಷತೆ ಎಂದರು.
ಇದನ್ನೂ ಓದಿ: ಕಿತ್ತೂರು ಉತ್ಸವದಲ್ಲಿ ಜನಸಾಗರ: ಕಲರ್‌ಫುಲ್ ಕೋಟೆಯಲ್ಲಿ ಸೆಲ್ಫಿಗೆ ಮುಗಿಬಿದ್ದ ಜನ