ಬೆಳಗಾವಿ: ವಿಶ್ವದ ಅತಿ ಎತ್ತರದ ನಂದಿ ವಿಗ್ರಹ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುಳ್ಳೂರು ಗುಡ್ಡದಲ್ಲಿ ನಿರ್ಮಿಸಲಾಗಿದ್ದು, ಮಾಜಿ ಶಾಸಕ ಅಶೋಕ ಪಟ್ಟಣ ಬೃಹತ್ ಮೂರ್ತಿಯನ್ನು ಲೋಕಾರ್ಪಣೆಗೊಳಿಸಿದರು.
22 ಅಡಿ ಎತ್ತರ, 32 ಅಡಿ ಉದ್ದ, 14 ಅಡಿ ಅಗಲದ ನಂದಿ ವಿಗ್ರಹ ನಿರ್ಮಿಸಲಾಗಿದೆ. ಮುಳ್ಳೂರು ಗುಡ್ಡದಲ್ಲಿರುವ 78 ಅಡಿ ಎತ್ತರದ ಶಿವನ ಮೂರ್ತಿ ಎದುರು ನಂದಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.
ಶಿವನ ಮೂರ್ತಿ ಮುಂಭಾಗದಲ್ಲಿಯೇ ಅತಿ ಎತ್ತರದ ನಂದಿ ವಿಗ್ರಹವನ್ನು ಇಂದು ಲೋಕಾರ್ಪಣೆಗೊಳಿಸಲಾಯಿತು. ಶಿವ ಹಾಗೂ ನಂದಿ ದರ್ಶನಕ್ಕೆ ಭಕ್ತವೃಂದ ತಂಡೋಪತಂಡವಾಗಿ ಆಗಮಿಸುತ್ತಿದೆ.
ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಎರಡು ವರ್ಷಗಳಿಂದ ಶಿಲ್ಪಿಗಳು ನಿರಂತರವಾಗಿ ನಂದಿ ವಿಗ್ರಹ ನಿರ್ಮಾಣ ಮಾಡಿದ್ದಾರೆ. ಇಂದು ರಾತ್ರಿ 9 ರಿಂದ 11.30ರವರೆಗೆ ಪದ್ಮಶ್ರೀ ಇಬ್ರಾಹಿಂ ಸುತಾರ್‌ರಿಂದ ಪ್ರವಚನ ನಡೆಯಲಿದೆ. ಶಿವರಾತ್ರಿ ಹಿನ್ನೆಲೆಯಲ್ಲಿ ಶಿವ ಹಾಗೂ ನಂದಿ ವಿಗ್ರಹ ದರ್ಶನಕ್ಕೆ ಭಕ್ತರು ಆಗಮಿಸುತ್ತಾರೆ.