ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಶಾವಿಗೆ ಒಣಹಾಕಿದ್ದ ಮಹಿಳೆಯನ್ನು ಕೆಲಸದಿಂದ ಗುತ್ತಿಗೆದಾರ ವಜಾ ಮಾಡಿರುವ ಘಟನೆ ನಡೆದಿದೆ. ಸುವರ್ಣ ಸೌಧಕ್ಕೆ ಭದ್ರತೆ ಒದಗಿಸಿದ (ಕೆಎಸ್ಐಎಸ್ಎಫ್) ಪೊಲೀಸರ ವೈಫಲ್ಯ ಮೇಲ್ನೋಟಕ್ಕೆ ಕಂಡುಬಂದಿದ್ದರೂ ಅಧಿಕಾರಿಗಳು ಯಾವುದೇ ಪರಿವೇ ಇಲ್ಲದೆ ಇರುವ ಮಹಿಳೆಯನ್ನ ಕೆಲಸದಿಂದ ತೆಗೆದುಹಾಕುವ ಮೂಲಕ ಅಧಿಕಾರಿಗಳು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಮಾಡಿದ್ರಾ ಎಂಬ ಅನುಮಾನ ಮೂಡಿದೆ.
ಹೌದು, ಬೆಳಗಾವಿ ತಾಲೂಕಿನ ಹಲಗಾ ಮತ್ತು ಬಸ್ತವಾಡ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 400ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡ ಸುವರ್ಣ ಸೌಧದ ಮುಂಭಾಗದಲ್ಲಿ ಮಹಿಳೆಯೊಬ್ಬರು ಶಾವಿಗೆ ಒಣಹಾಕಿದ್ದರು. ಶಾವಿಗೆ ಒಣ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇದರಿಂದ ಎಚ್ಚೆತ್ತುಕೊಂಡ ಪಿಡಬ್ಲೂಡಿ ಅಧಿಕಾರಿಗಳು ಗುತ್ತಿಗೆದಾರನಿಗೆ ಸುವರ್ಣ ಸೌಧದ ಉಪವಿಭಾಗದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನೋಟಿಸ್ ನೀಡಿದ್ದರು. ಇದಕ್ಕೆ ಉತ್ತರ ನೀಡಿರುವ ಗುತ್ತಿಗೆದಾರ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿದೆ. ಮಹಿಳೆಯ ಅಚಾತುರ್ಯದಿಂದ ಈ ಘಟನೆ ನಡೆದಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಲ್ಲಾ ಗುತ್ತಿಗೆದಾರರಿಗೆ ನೋಟಿಸ್ ನೀಡಲಾಗಿದೆ. ಆದ್ರೆ, ಯಾವುದರ ಪರಿವೇ ಇಲ್ಲದೇ ಶಾವಿಗೆ ಒಣಹಾಕಿದ್ದ ಬೆಳಗಾವಿ ತಾಲೂಕಿನ ಕೊಂಡಸಕೊಪ್ಪ ಗ್ರಾಮದ ಮಹಿಳೆಯನ್ನು ವಜಾ ಮಾಡಿರುವ ಗುತ್ತಿಗೆದಾರ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗಿದೆ. ಸುವರ್ಣ ಸೌಧದ ಭದ್ರತೆ ವಹಿಸಿಕೊಂಡಿರುವ ಪೊಲೀಸರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿದ್ದು, ಭದ್ರತೆಗಿದ್ದ ಪೊಲೀಸರ ವಿರುದ್ಧವೂ ನಗರ ಪೊಲೀಸ್ ಆಯುಕ್ತರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಡಚಿ ಶಾಸಕ ಪಿ. ರಾಜೀವ್, ಸುವರ್ಣಸೌಧದಲ್ಲಿ ಕೆಲಸ ಮಾಡುತ್ತಿರುವ ಶ್ರಮಿಕ ಮಹಿಳೆಯ ಕೆಲಸವನ್ನು ನಾನು ಗೌರವಿಸುತ್ತೇನೆ. ಆದ್ರೆ, ಆಕೆ ಶಾವಿಗೆ ಹಾಕುವ ಸ್ಥಳ ಅದು ಅಲ್ಲ. ಇಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಬಂದಾಗ ಕೊನೆಗೆ ಬಲಿಪಶು ಆಗೋದು ಬಡಪಾಯಿಗಳು. ಇಂತಹ ಘಟನೆಗಳು ಆಗಬಾರದು. ಮಹಿಳೆಯನ್ನ ಕೆಲಸದಿಂದ ತೆಗೆದಿರುವ ವಿಚಾರಕ್ಕೆ ಅಧಿಕಾರಿಗಳೊಂದಿಗೆ ನಾನು ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ಆಡಳಿತದಲ್ಲಿ ಹಿಂದುಳಿದಿದೆ ಎಂಬ ಆರೋಪಗಳಿವೆ. ಈ ಮಹದಾಸೆಯಿಂದ ಸುವರ್ಣ ಸೌಧ ಕಟ್ಟಿದ್ದೇವೆ. ಸದ್ಬಳಕೆ ಆಗುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರ ಕೆಲವೊಂದು ಇಲಾಖೆಗಳನ್ನ ಸುವರ್ಣ ಸೌಧಕ್ಕೆ ವರ್ಗಾವಣೆ ಮಾಡಿದೆ. ಮತ್ತಷ್ಟು ಇಲಾಖೆಗಳನ್ನು ತರಲಾಗುತ್ತದೆ ಎಂದರು.
ಓದಿ: ಯಾರ ಸಹಾಯ ಇಲ್ಲದೆಯೇ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ: ಬಿಎಸ್ವೈ