ಬೆಳಗಾವಿ: ಮಹಿಳೆಯನ್ನು ಎಳೆದಾಡಿ ಅರೆಬೆತ್ತಲೆಗೊಳಿಸಿರುವ ಮತ್ತೊಂದು ಅಮಾನವೀಯ ಕೃತ್ಯ ಬೆಳಗಾವಿ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಒಂದೇ ದಿನ ಎರಡು ಬಾರಿ ಅರೆಬೆತ್ತಲೆಗೊಳಿಸಿ, ಅವಾಚ್ಯ ಶಬ್ದಗಳಿಂದ ಮಹಿಳೆಗೆ ನಿಂದಿಸಿ, ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ ನವೆಂಬರ್ 21 ರಂದು ಘಟನೆ ನಡೆದಾಗಲೇ ಬೈಲಹೊಂಗಲ ಠಾಣೆಗೆ ದೂರು ನೀಡಲು ಸಂತ್ರಸ್ತ ಮಹಿಳೆ ಹೋಗಿದ್ದರು. ಆದರೆ, ಆಗ ಮಹಿಳೆಯಿಂದ ದೂರು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದು, ಇದರಿಂದ ಸಂತ್ರಸ್ತ ಮಹಿಳೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. ಮಹಿಳಾ ಆಯೋಗದ ನಿರ್ದೇಶನದ ಮೇರೆಗೆ ಡಿ.30ಕ್ಕೆ ಬೈಲಹೊಂಗಲ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, 6 ಮಹಿಳೆಯರೂ ಸೇರಿ 20 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಗ್ರಾಮದ 20 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಈ ಪ್ರಕರಣವನ್ನು ಬೆಳಗಾವಿ ಜಿಲ್ಲಾ ಮಹಿಳಾ ಠಾಣೆಗೆ ವರ್ಗಾಯಿಸಲಾಗಿದೆ. ಆದರೆ ಪ್ರಕರಣ ಸಂಬಂಧ ಈವರೆಗೆ ಯಾರ ಬಂಧನವೂ ಆಗಿಲ್ಲ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಏನಿದು ಘಟನೆ?: ನಮ್ಮ ಜಮೀನಿಗೆ ಹೊಂದಿಕೊಂಡೇ ಹಲ್ಲೆ ಮಾಡಿದ ಆರೋಪಿಗಳು ಪೈಪ್‌ಲೈನ್ ಅಳವಡಿಸಿದ್ದರು. ಇದರಿಂದ ನಮ್ಮ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿತ್ತು. ಈ ಕುರಿತು ಲೋಕೋಪಯೋಗಿ ಇಲಾಖೆಗೆ ದೂರು ನೀಡಿದ್ದೆ. ದೂರಿನ ಆಧಾರದ ಮೇಲೆ ಪೈಪ್‌ಲೈನ್ ಅನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ಇದೇ ವಿಚಾರಕ್ಕೆ ನವೆಂಬರ್ 21 ರಂದು ನಮ್ಮ ಜೊತೆ ಜಗಳವಾಡಿದ್ದರು. ಇದೇ ವೇಳೆ ಅರೆ ಬೆತ್ತಲೆಗೊಳಿಸಿ, ಗ್ರಾಪಂ ಕೊಠಡಿಯಲ್ಲಿ ಕೂಡಿ ಹಾಕಿ ಜೀವಬೆದರಿಕೆ ಹಾಕಿದ್ದರು. ಮತ್ತು ನನ್ನ ಬ್ಯಾಗ್‌ನಲ್ಲಿದ್ದ ಹಣ, ಮೊಬೈಲ್ ಕಸಿದುಕೊಂಡಿದ್ದರು ಎಂದು ನೊಂದ ಮಹಿಳೆ ದೂರಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ನೊಂದ ಮಹಿಳೆ, "ಏಕಾಏಕಿ ನನ್ನ ಮೇಲೆ 25 ರಿಂದ 30 ಜನ ಹಲ್ಲೆ ಮಾಡಿದ್ದಾರೆ. ನನ್ನ ಕೂದಲು ಹಿಡಿದು ಎಳೆದಾಡಿದ್ದಾರೆ. ಕಾಲಿನಿಂದ ಒದ್ದು ಹಿಂಸೆ ನೀಡಿದ್ದಾರೆ. ದೂರು ಕೊಡಬೇಕೆಂದು ಪೊಲೀಸ್ ಠಾಣೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಾಗ, ಅಲ್ಲಿಂದ ನನ್ನನ್ನು ಎಳೆದುಕೊಂಡು ಬಂದು ಪಂಚಾಯಿತಿಯಲ್ಲಿ ಕೂಡಿ ಹಾಕಿದ್ದರು. ಕೂಡಿ ಹಾಕಿ ನನ್ನ ಬಳಿ ಇದ್ದ ಫೋನ್ ಹಾಗೂ ಹಣವನ್ನು ಕಸಿದುಕೊಂಡರು. ನಂತರ ನನ್ನ ಕಡೆಯಿಂದ ಬಲವಂತವಾಗಿ ಕೆಲ ದಾಖಲಾತಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಸಂಜೆಯ ವೇಳೆ ನನ್ನನ್ನು ಅಲ್ಲಿಂದ ಬಿಟ್ಟರು. ಮಾರನೇ ದಿನ ನಾನು ಬೈಲಹೊಂಗಲ ಠಾಣೆಗೆ ಬಂದು ದೂರು ನೀಡಲು ಮುಂದಾದೆ. ಆಗ ಪೊಲೀಸರು ನನಗೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ" ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣ: ಮೂವರು ಆರೋಪಿಗಳು ಸಿಐಡಿ ವಶಕ್ಕೆ