ಬೆಳಗಾವಿ: ಕಳೆದ ವರ್ಷ ನೇಕಾರರು ಜಲಪ್ರವಾಹದಲ್ಲಿ ಬದುಕು ಕಳೆದುಕೊಂಡು ಬೀದಿಗೆ ಬಂದಿದ್ದರು. ಮತ್ತೆ ಬದುಕು ಕಟ್ಟಿಕೊಳ್ಳಬೇಕು ಅನ್ನುವಷ್ಟರಲ್ಲಿ ಕೊರೊನಾ ಮಹಾಮಾರಿಗೆ ಸಿಕ್ಕು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ರು. ಹಳೆಯ ಸಾಲ, ಇತ್ತ ಉದ್ಯಮಕ್ಕೆ ಸಿಗದ ಬೆಂಬಲ ಇದರಿಂದ ಕಂಗಾಲಾದ ಸಾಕಷ್ಟು ನೇಕಾರರು ಆತ್ಮಹತ್ಯೆ ದಾರಿ ಹಿಡಿದ್ರು. ಇಷ್ಟೆಲ್ಲ ಆದರೂ ನೇಕಾರರಿಗೆ ಸರ್ಕಾರ ಮಾಡಿದಾದ್ರೂ ಏನು? ಇತ್ತ ಜವಳಿ ಖಾತೆ ಸಚಿವರನ್ನ ಹುಡುಕಿಕೊಡಿ ಅಂತಾ ನೇಕಾರರು ಹೇಳ್ತಿದ್ದಾರೆ.
ಮಾರಾಟವಾಗದೇ ರಾಶಿ ರಾಶಿಯಾಗಿ ಬಿದ್ದಿರುವ ಸೀರೆಗಳನ್ನ ನೋಡ್ತಿದ್ರೆ ನಿಜಕ್ಕೂ ನೇಕಾರರಿಗೆ ಕರುಳು ಕಿತ್ತು ಬರುವಂತಾಗಿದೆ. ಇತ್ತ ನೊಂದ ಕುಟುಂಬಗಳಿಗೂ ಸಿಗದ ಪರಿಹಾರಕ್ಕೆ ಸರ್ಕಾರದ ವಿರುದ್ದ ನೇಕಾರ ಸಮುದಾಯದ ಮುಖಂಡರು ಗುಡುಗುತ್ತಿದ್ದಾರೆ. ನಾಪತ್ತೆಯಾಗಿರುವ ಜವಳಿ ಖಾತೆ ಸಚಿವರನ್ನ ಹುಡುಕಿಕೊಡುವಂತೆ ಮನವಿ ಮಾಡ್ತಿದ್ದಾರೆ.
ಅತಿ ಹೆಚ್ಚು ನೇಕಾರರಿರುವುದು ಬೆಳಗಾವಿ ಜಿಲ್ಲೆಯಲ್ಲಿ. ಈ ಭಾಗದಲ್ಲೇ ಹೆಚ್ಚಾಗಿ ಸೀರೆಯನ್ನ ನೇಯಲಾಗುತ್ತೆ. ಕಳೆದ ವರ್ಷ ಪ್ರವಾಹದಲ್ಲಿ ಬದುಕು ಕಳೆದುಕೊಂಡಿದ್ದ ಈ ಎಲ್ಲ ನೇಕಾರರು ನಂತರ ಸಾಲ ಮಾಡಿಕೊಂಡು ನೇಕಾರಿಕೆ ಆರಂಭಿಸಿದ್ದರು. ಹೆಚ್ಚು ಪ್ರಮಾಣದಲ್ಲಿ ಸೀರೆ ಸಿದ್ದಪಡಿಸಿ ಮಾರಾಟಕ್ಕೆ ಸಜ್ಜಾಗಿದ್ದರು. ಅಷ್ಟರಲ್ಲಿ ಕೊರೊನಾ ಲಾಕ್ಡೌನ್ ಆಗಿ ನೇಯ್ದಿದ್ದ ಸೀರೆಗಳೆಲ್ಲವೂ ಮನೆ ಹಾಗೂ ಗೋಡೌನ್ಗಳಲ್ಲೇ ಉಳಿಯುವಂತಾಯಿತು. ಅನ್ ಲಾಕ್ ಆದರೂ ಕೂಡ ಸೀರೆಯ ಮಾರ್ಕೆಟ್ ಕೂಡ ಬಿದ್ದು, ಸೀರೆಯನ್ನ ಯಾರೂ ಕೊಳ್ಳಲಿಲ್ಲ. ಸಾಲ ಮಾಡಿ ನೇಕಾರಿಕೆ ಮಾಡಿದವರು ಸಾಲ ತೀರಿಸಲಾಗದೇ ಆತ್ಮಹತ್ಯೆ ದಾರಿ ಹಿಡಿದ್ರು.
ಇದನ್ನ ಗಮನಿಸಿದ ಸರ್ಕಾರ ಕಳೆದ ಮೂರು ತಿಂಗಳ ಹಿಂದೆಯೇ ನೇಕಾರರ ಎಲ್ಲ ಸೀರೆಗಳನ್ನ ಸರ್ಕಾರವೇ ಖರೀದಿ ಮಾಡುತ್ತೆ ಅಂತಾ ಹೇಳಿ ಆಶಾಭಾವನೆ ಮೂಡಿಸಿತ್ತು. ಅದರಲ್ಲೂ ದೀಪಾವಳಿ ಹಬ್ಬದ ಮೊದಲೇ ಖರೀದಿ ಮಾಡುತ್ತೇವೆ ಅಂತಾ ಹೇಳಿದ್ರೂ ಇದೀಗ ದೀಪಾವಳಿ ಹಬ್ಬಕ್ಕೆ ಒಂದು ವಾರ ಬಾಕಿ ಇದ್ದು, ಹೀಗಾಗಿ ಸರ್ಕಾರ ನಮಗೆ ನಂಬಿಸಿ ಮೋಸ ಮಾಡಿದೆ ಅಂತಾ ನೇಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಅಷ್ಟಕ್ಕೂ ಬೆಳಗಾವಿ ಜಿಲ್ಲೆ ಜವಳಿ ಖಾತೆ ಸಚಿವರ ತವರು ಜಿಲ್ಲೆ ಇಲ್ಲಿನ ನೇಕಾರರಿಗೆ ಸಹಕಾರಿಯಾಗಬೇಕಿದ್ದ ಸಚಿವ ಶ್ರೀಮಂತ್ ಪಾಟೀಲ್ ಮಾತ್ರ ನಾಪತ್ತೆಯಾಗಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಕೇವಲ ಒಂದು ಬಾರಿ ಭೇಟಿಕೊಟ್ಟಿರುವ ಮಿನಿಸ್ಟರ್ ಇವತ್ತಿನ ವರೆಗೂ ಪತ್ತೆಯಿಲ್ಲ. ಇಡೀ ರಾಜ್ಯದಲ್ಲಿ 15ಕ್ಕೂ ಅಧಿಕ ಜನ ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಳಗಾವಿ ಜಿಲ್ಲೆ ಒಂದರಲ್ಲೇ ಆರು ಜನ ನೇಕಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದ್ರಲ್ಲಿ ಕೇವಲ ಮೂರು ಜನರಿಗೆ ಪರಿಹಾರ ಬಿಡುಗಡೆಯಾಗಿದ್ದು, ಆ ಹಣ ಕೂಡ ಖಾತೆಗೆ ಜಮಾವಣೆಯಾಗಿಲ್ಲ.
ಇತ್ತ ಸರ್ಕಾರ ಎಷ್ಟು ಪ್ರಮಾಣದಲ್ಲಿ ಸೀರೆ ಉಳಿದುಕೊಂಡಿವೆ ಎಂಬುದರ ಕುರಿತು ಸರ್ವೆ ಮಾಡಲು ಅಧಿಕಾರಿಗಳಿಗೆ ಹೇಳಿದೆ. ಅಧಿಕಾರಿಗಳು 85 ಲಕ್ಷ ಸೀರೆಗಳು ಉಳಿದಿದ್ದು, ಸುಮಾರು 900ಕೋಟಿಯಷ್ಟು ಹಣ ಬೇಕು ಅಂತಾ ಹೇಳಿದೆ. ಇದರಿಂದ ಸರ್ಕಾರ ಸೀರೆಕೊಳ್ಳುವುದನ್ನ ಬಿಟ್ಟಿದೆಯಂತೆ. ಆದ್ರೆ ನೇಕಾರ ಸಂಘಟನೆ ಮುಖಂಡರೇ ಹೇಳುವ ಪ್ರಕಾರ ಸುಮಾರು 70 ಕೋಟಿಯಷ್ಟು ಹಣ ಮೀಸಲಿಟ್ಟರೆ ಸಾಕು ಎಲ್ಲ ಸೀರೆ ಮಾರಬಹುದು ಅಂತಿದ್ದಾರೆ. ಈ ವಿಚಾರದ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೂಡ ಸರ್ಕಾರದ ವಿರುದ್ದ ಗುಡುಗಿದ್ದು, ಸರ್ಕಾರ ಸುಳ್ಳು ಹೇಳಿ ನೇಕಾರರನ್ನ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದೆ. ಸರ್ಕಾರ ಈ ರೀತಿ ಮಾಡುವುದು ಹೊಸದೇನೂ ಅಲ್ಲಾ ನೇಕಾರರಿಗೆ ಇದೊಂದು ದೊಡ್ಡ ಬರೆ ಎಳೆದಿದೆ ಅಂದಿದ್ದಾರೆ.
ಬದುಕು ಸಾಗಿಸಲಾಗದೇ ಕೆಲ ನೇಕಾರರು ಆತ್ಮಹತ್ಯೆಯತ್ತ ಮುಖ ಮಾಡ್ತಿದ್ರೇ ಇನ್ನೂ ಕೆಲವರು ಒಂದೊತ್ತಿನ ಊಟಕ್ಕೆ ಪರಿತಪ್ಪಿಸುತ್ತಿದ್ದಾರೆ. ಜವಳಿ ಸಚಿವರು ಇದೇ ಜಿಲ್ಲೆಯವರಾದ್ರೂ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸ ಮಾಡುತ್ತಿಲ್ಲ, ಸಂಕಷ್ಟದಲ್ಲಿರುವವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿಲ್ಲ. ಇಂತಹ ಸಚಿವರು ಇದ್ದರೆಷ್ಟು ಬಿಟ್ಟರೆಷ್ಟು ಅನ್ನುವ ಆಕ್ರೋಶ ನೇಕಾರರದ್ದು.