ಬೆಳಗಾವಿ: ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
ಚೆನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಕಿತ್ತೂರು ಉತ್ಸವಕ್ಕೆ ಸಿಎಂ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ- ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು - ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ರಾಜ್ಯಮಟ್ಟದ ಉತ್ಸವ:
ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಲಿದೆ. ಕೆಲವು ವರ್ಷಗಳ ಹಿಂದೆ ವೀರ ಜ್ಯೋತಿ ಬೆಳಗಾವಿ ಜಿಲ್ಲೆ ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿಯು ರಾಜ್ಯಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ವೇದಿಕೆಯ ಮೂಲಕವೇ ಅಧಿಕಾರಿಗಳಿಗೆ ಆದೇಶ ನೀಡಿದರು.
ಚೆನ್ನಮ್ಮ ಎಲ್ಲರಿಗೂ ಪ್ರೇರಣೆ:
ಕಿತ್ತೂರು ಚೆನ್ನಮ್ಮ ಝಾನ್ಸಿ ರಾಣಿಗಿಂತ 40 ವರ್ಷಗಳ ಮುಂದೆಯೇ ಸ್ವಾತಂತ್ರ್ಯಕ್ಕಾಗಿ ಕತ್ತಿ ಝಳಪಿಸಿದಳು. ಈ ಐತಿಹಾಸಿಕ ಸಾಧನೆಯನ್ನು ಜಗತ್ತಿಗೆ ಸಾರುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಪ್ರಥಮ ಮಹಿಳೆ ಎಂಬುದನ್ನು ಸಾಬೀತು ಪಡಿಸಬೇಕಿದೆ. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದ ಚೆನ್ನಮ್ಮ ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.
ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ಅವರದ್ದು ತಾಯಿ - ಮಗನ ಸಂಬಂಧ. ಬ್ರಿಟಿಷರ ಕುತಂತ್ರಕ್ಕೆ ರಾಯಣ್ಣ ಸೆರೆ ಸಿಕ್ಕಾಗ ಚೆನ್ನಮ್ಮ ಅಧೀನರಾದರು. ಸತ್ಯ, ನ್ಯಾಯ ಹಾಗೂ ದೇಶಕ್ಕಾಗಿ ಹೋರಾಡಲು ನಾವು ಸಂಕಲ್ಪ ಮಾಡಬೇಕಿದೆ. ದೇಶವನ್ನು ಆಂತರಿಕ ಮತ್ತು ಬಾಹ್ಯಶಕ್ತಿಗಳಿಂದ ರಕ್ಷಿಸಬೇಕಿದೆ. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಪ್ರಧಾನಮಂತ್ರಿಗಳು ದೇಶವನ್ನು ಸಶಕ್ತವಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಕಿತ್ತೂರು ಮಾಸ್ಟರ್ ಪ್ಲ್ಯಾನ್ಗೆ ಹೆಚ್ಚಿನ ಅನುದಾನ:
ಪ್ರಾಧಿಕಾರದ ಮಾಸ್ಟರ್ ಯೋಜನೆಗೆ ಒಟ್ಟಾರೆ 200 ಕೋಟಿ ರೂ. ಅನುದಾನ ನೀಡಬೇಕೆಂಬ ಬೇಡಿಕೆ ಇದೆ. ಮುಂದಿನ ಆಯವ್ಯಯದಲ್ಲಿ ಪ್ರಾಧಿಕಾರಕ್ಕೆ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಸಿಎಂ ಭರವಸೆ ನೀಡಿದರು.
ಮೀಸಲು - ಕಾನೂನು ಪರಿಶೀಲಿಸಿ ಸೂಕ್ತ ಕ್ರಮ:
ಮೀಸಲಾತಿ ಒದಗಿಸಲು ಹಾಗೂ ಪ್ರಮಾಣ ಹೆಚ್ಚಿಸಲು ಬೇಡಿಕೆಗಳು ಕೇಳಿ ಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನು ತೊಡಕುಗಳು ಇರುವುದರಿಂದ ಅವುಗಳನ್ನು ಗಮನದಲ್ಲಿಟ್ಟುಕೊಂಡು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರ್ಕಾರ ಪರಿಶೀಲಿಸುತ್ತಿದೆ. ಕಾನೂನು ಇತಿ - ಮಿತಿಗಳನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದರು.
ಸಂಗೊಳ್ಳಿ ಸೈನಿಕ ಶಾಲೆಯೂ ಕೂಡ ಮುಕ್ತಾಯ ಹಂತದಲ್ಲಿದೆ. ರಕ್ಷಣಾ ಇಲಾಖೆಯ ಜೊತೆ ಚರ್ಚಿಸಿ ಶಾಲೆಯನ್ನು ರಾಜ್ಯ ಸರ್ಕಾರದ ವ್ಯಾಪ್ತಿಗೆ ಸೇರಿಸಿ ಉನ್ನತಮಟ್ಟದ ಮಿಲಿಟರಿ ಶಾಲೆ ಆರಂಭಿಸಲಾಗುವುದು ಎಂದರು.
ಇದನ್ನೂ ಓದಿ: ಪಕ್ಷ ತೊರೆಯುವ ಶಾಸಕರು, ಮುಖಂಡರ ನಡೆಗೆ JDS ದಳಪತಿಗಳ ಪ್ರತಿತಂತ್ರವೇನು?