ಬೆಳಗಾವಿ : ದಿ.ಸುರೇಶ ಅಂಗಡಿ ಗಲ್ಲಿ ಗಲ್ಲಿಯೂ ಓಡಾಡಿ ಬೆಳಗಾವಿಯಲ್ಲಿ ಪಕ್ಷ ಕಟ್ಟಿ ಮಾದರಿ ಜಿಲ್ಲೆಯನ್ನಾಗಿಸಿದ್ದಾರೆ. ಹೀಗಾಗಿ, ಸುರೇಶ ಅಂಗಡಿಯವರ ಧರ್ಮಪತ್ನಿ ಮಂಗಳಾ ಅಂಗಡಿ ಚುನಾವಣೆ ಅಂದುಕೊಳ್ಳದೇ 'ನಮ್ಮ ಚುನಾವಣೆ' ಎಂದು ಎದುರಿಸಬೇಕೆಂದು ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದರು.
ನಗರದ ಸನ್ಮಾನ ಹೋಟೆಲ್ ಎದುರಿಗಿರುವ ಗಾಂಧಿ ಭವನದಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮಂಗಳಾ ಅಂಗಡಿ ಅವರ ಚುನಾವಣೆ ಅಂದುಕೊಳ್ಳದೇ ನಮ್ಮ ಚುನಾವಣೆ ಅಂತ ಎದುರಿಸಬೇಕಾಗಿದೆ.
ವಿಶೇಷವಾಗಿ 100ಕ್ಕೆ 90ರಷ್ಟು ಮಹಿಳೆಯರು ಚುನಾವಣೆಯಲ್ಲಿ ಭಾಗಿಯಾಗಿ ಮಂಗಳಾ ಅಂಗಡಿ ಅವರಿಗೆ ಮತ ನೀಡಿದ್ರೆ ಕನಿಷ್ಠ ಎರಡೂವರೆ ಲಕ್ಷ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದರು.
ಬೆಳಗಾವಿ ಉಪಚುನಾವಣೆ ಬೇರೆ ಪಕ್ಷಗಳ ಅಭ್ಯರ್ಥಿಯ ಹೆಸರು ಅವರ ಬಗ್ಗೆ ಪ್ರಸ್ತಾಪ ಮಾಡೋದಿಲ್ಲ. ಕಳೆದ ಒಂದು ವರ್ಷದ ಅವಧಿಯಲ್ಲಿ ನಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು, ಕೋವಿಡ್‌ನಂತಹ ಪೀಡುಗಿನ ಸಂದರ್ಭದಲ್ಲಿಯೂ ಬಿಜೆಪಿ ಸರ್ಕಾರ ಉತ್ತಮ ಬಜೆಟ್ ಮಂಡಿಸಿದೆ.
ಮಹಿಳೆಯರಿಗೆ ಹೆಚ್ಚಿನ ಸೌಲಭ್ಯಗಳನ್ನು ಕೊಟ್ಟಿದ್ದೇವೆ. ಹೀಗಾಗಿ, ಮಹಿಳೆಯರು ಸೇರಿ ಪಕ್ಷದ ಕಾರ್ಯಕರ್ತರೆಲ್ಲೂ ಹೆಚ್ಚಿನ ಚುನಾವಣೆಯಲ್ಲಿ ಭಾಗವಹಿಸಿ ಮತ ನೀಡುವ ಮೂಲಕ ಶ್ರೀಮತಿ ಮಂಗಳಾ ಅಂಗಡಿ ಗೆಲುವಿಗೆ ಶ್ರಮಿಸಬೇಕು. ಅದಕ್ಕಾಗಿ ಜಿಲ್ಲೆಯ ಪ್ರತಿ ಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತರು ಸರ್ಕಾರದ ಅಭಿವೃದ್ಧಿ ಕೆಲಸ, ಚುನಾವಣಾ ಮಹತ್ವ ತಿಳಿಸಬೇಕು ಎಂದರು.
ಸುರೇಶ ಅಂಗಡಿ ರೈಲ್ವೆ ಸಚಿವರಾದ ಬಳಿಕ ಕರ್ನಾಟಕದಲ್ಲಿ ಹಲವಾರು ರೈಲ್ವೆ ಯೋಜನೆಗಳನ್ನು ತಂದಿದ್ದಾರೆ. ನನೆಗುದಿಗೆ ಬಿದ್ದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಎಲ್ಲ ಕಾರ್ಯಕರ್ತರು 'ಇದು ನಮ್ಮ ಚುನಾವಣೆ' ಎಂದು ಭಾವಿಸಿ ಪ್ರಚಾರ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಜನರ ಕಲ್ಯಾಣಕ್ಕೆ ಶಕ್ತಿ ಮೀರಿ ಕೆಲಸ ಮಾಡಿದ್ದೇವೆ.
ಮಂಗಳಾ ಅಂಗಡಿ ಅವರನ್ನು ಗೆಲ್ಲಿಸುವುದೇ ನಮ್ಮ ಸಂಕಲ್ಪ ಎಂದರು.
ಕೇವಲ ಬೆಳಗಾವಿ ಅಷ್ಟೇ ಅಲ್ಲ, ರಾಜ್ಯದಲ್ಲಿ ಅತಿವೃಷ್ಟಿಯಿಂದ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ ಹಣ ಸಿಕ್ಕಲ್ಲವೋ ಅವರೆಲ್ಲರಿಗೂ ಹಣ ಬಿಡುಗಡೆ ಮಾಡುತ್ತೇನೆ. ಸರ್ಕಾರಕ್ಕೆ ಬೊಕ್ಕಸಕ್ಕೆ ತೊಂದರೆಯಾದರೂ ಚಿಂತೆ ಇಲ್ಲ. ಅತಿವೃಷ್ಟಿ ಸಂತ್ರಸ್ತರಿಗೆ ಸೂರು ನೀಡುವೆ ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್, ರಾಜ್ಯ ಬಿಜಿಪಿ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಶಶಿಕಲಾ ಜೊಲ್ಲೆ ಇದ್ದರು.