ಬೆಳಗಾವಿ: ಮಂತ್ರಿ ಆಗಬೇಕೆಂಬ ಸ್ವಾರ್ಥದಿಂದ ನಾವು ಯಾರೂ ಬಿಜೆಪಿ ಸೇರಿಲ್ಲ. ಬಿಜೆಪಿ ಪಕ್ಷಕ್ಕೆ ನಾವು ಮಂತ್ರಿ ಆಗಬೇಕು ಅಂತಾ ಬಂದಿಲ್ಲ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದ್ದಾರೆ.
ಜಿಲ್ಲೆಯ ಗೋಕಾಕ್ ನಗರದಲ್ಲಿ ನೂತನ ಸಚಿವ ರಮೇಶ ಜಾರಕಿಹೊಳಿ ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಂತ್ರಿ ಆಗಬೇಕು ಎಂಬ ಸ್ವಾರ್ಥದಿಂದ ನಾವು ಯಾರೂ ಬಿಜೆಪಿ ಸೇರಿಲ್ಲ. ಬಿಜೆಪಿ ಪಕ್ಷಕ್ಕೆ ನಾವು ಮಂತ್ರಿ ಆಗಬೇಕು ಅಂತಾ ಬಂದಿಲ್ಲ. ಬೆಳಗಾವಿ ರಾಜಕಾರಣಕ್ಕೆ ಕೈ ಹಾಕಬೇಡಿ ಅಂತಾ ಸಮ್ಮಿಶ್ರ ಸರ್ಕಾರ ಇದ್ದಾಗ ಹೇಳಿದ್ದೆವು.
ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಬೆಂಕಿ ಚೆಂಡು ಇದ್ದ ಹಾಗೇ ಅಂತಾನೂ ಹೇಳಿದ್ದೆವು. ಆದರೆ, ಕಾಂಗ್ರೆಸ್‌ನ ಯಾವ ನಾಯಕರೂ ನಮ್ಮ ಮಾತು ಕೇಳಲಿಲ್ಲ. ಪರಿಣಾಮ ನಾವೆಲ್ಲರೂ ಸೇರಿ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಉರಳಿಸಿದೆವು. ಇದಾದ ಬಳಿಕ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂತು. ಒಂದೂವರೆ ವರ್ಷದ ಹಿಂದೆ ನಡೆದಿದ್ದು ಇತಿಹಾಸ ಎಂದರು.
ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನೀರಾವರಿ ಮಂತ್ರಿ ಮಾಡಲು ಒತ್ತಾಯ ಮಾಡಿದ್ದೇವೆ. ಅಥಣಿ ಭಾಗದ ಕೃಷ್ಣ ನೀರಾವರಿ ಯೋಜನೆಗೆ ಚಾಲನೆ ಸಿಗಲಿ ಎಂಬ ಕಾರಣಕ್ಕೆ ನೀರಾವರಿ ಖಾತೆ ನೀಡಲು ಮನವ ಮಾಡಿದ್ದೇವೆ. ಮೊದಲು ಗೋಕಾಕ್ ಕರದಂಟಿಗೆ ಫೇಮಸ್ ಇತ್ತು, ಈಗ ರಮೇಶ್ ಜಾರಕಿಹೊಳಿ ಅವರಿಂದ ಪ್ರಸಿದ್ದಿ ಆಗಿದೆ. ಅವರ ಹಿಂದಿನ ಶಕ್ತಿ ಗೋಕಾಕ್ ಕ್ಷೇತ್ರದ ಜನ ಎಂದರು.