ಬೆಳಗಾವಿ: ಸಿದ್ದರಾಮಯ್ಯ, ಡಿಕೆಶಿ ಇಬ್ಬರ ಕದನದಲ್ಲಿ ಎಂ. ಬಿ ಪಾಟೀಲ್‌ಗೆ ಚಾನ್ಸ್ ಬರಬಹುದಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್, ಇಬ್ಬರ ಕದನದಾಗ ನಾ ಯಾಕೆ ಬರಲಿ. ನಮಗೂ ಸಾಮರ್ಥ್ಯ ಇದೆ ಎನ್ನುವ ಮೂಲಕ ತಾನು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇಬ್ಬರ ಕದನದಾಗ ಯಾಕಪಾ? ನಮಗೂ ಸಾಮರ್ಥ್ಯ ಇದೆ. ಯಾವಾಗ ಬೇಕು, ಅವಾಗ ನೇರವಾಗಿಯೇ ಬರುತ್ತೇನೆ. ಎಂ. ಬಿ ಪಾಟೀಲ್ ಇಬ್ಬರ ಕದನದಾಗ ಬರುವಂತದ್ದು ಬೇಕಾಗಿಲ್ಲ. ನಾವು ಬರಬೇಕು ಎಂದರೆ ನೇರವಾಗಿಯೇ ಬರುತ್ತೇವೆ. 'ವಿ ಆರ್ ನಾಟ್ ಎ ಸೆಕೆಂಡ್ ಕ್ಲಾಸ್ ಸಿಟಿಜನ್ಸ್' ಎನ್ನುವ ಮೂಲಕ ತಾನು ಸಿಎಂ ಹುದ್ದೆಗೆ ಸಮರ್ಥ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಪಂಜಾಬ್ ಮಾದರಿಯಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾಡಬಹುದು ಹಾಗೆ, ಅವರು ಮಾಡಿದಾಗ ಮಾತ್ರ ಕರೆಕ್ಟ್ ಆಗುತ್ತದೆ ಎಂದರು. ಸಿಎಂ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ವಿಚಾರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಸರ್ವೇ ಸಾಮಾನ್ಯ ಪದ್ಧತಿ ಇದೆ.
ಚುನಾವಣೆ ಬಳಿಕ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಣಯ ಮಾಡುತ್ತದೆ. ಕಾಂಗ್ರೆಸ್ ಪಕ್ಷ ಒಂದು ವೇಳೆ ಬಯಸಿದರೆ, ಪಂಜಾಬ್ ರೀತಿ ಯಾರನ್ನು ಪ್ರಾಜೆಕ್ಟ್ ಮಾಡಿದ್ರೆ ಅವರೂ ಅದನ್ನ ಡಿಕ್ಲೇರ್ ಮಾಡ್ತಾರೆ. ಹೈಕಮಾಂಡ್ಗೆ ಕೇಳುವ ಪ್ರಶ್ನೆಯನ್ನ ನನ್ನನ್ನು ಕೇಳಿದ್ರೆ ಹೇಗೆ? ಹೈಕಮಾಂಡ್ ಆ ನಿರ್ಣಯ ತಗೆದುಕೊಳ್ಳಬಹುದು. ತೆಗೆದುಕೊಳ್ಳದೇ ಇರಬಹುದು ಎಂದರು.
ಮೂಕ ಪ್ರೇಕ್ಷಕರಲ್ಲ: ಉತ್ತರ ಕರ್ನಾಟಕದಲ್ಲಿ ಎಂ. ಬಿ ಪಾಟೀಲ್, ವಿನಯ್ ಕುಲಕರ್ಣಿ ಮನಸು ಮಾಡಿದರೆ ಲಿಂಗಾಯತ ಸಿಎಂ ಆಗಬಹುದು ಅಂತಾ ಮಾಧ್ಯಮಗಳ ಪ್ರಶ್ನೆಗೆ, ಯಾರೂ ಕೂಡ ಮೂಕ ಪ್ರೇಕ್ಷಕರಲ್ಲ. ಒಕ್ಕಲಿಗ ಇರಬಹುದು, ಲಿಂಗಾಯತ ಸಮುದಾಯವರು ಇರಬಹುದು. ಮುಸಲ್ಮಾನರು ಏಕೆ ಸಿಎಂ ಆಗಬಾರದು?. ದಲಿತರು ಏಕೆ ಆಗಬಾರದು? ಎಂದು ಪ್ರಶ್ನಿಸಿದರು.
ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬೆಳಗಾವಿ ಕಾಂಗ್ರೆಸ್ ಭವನದಿಂದ ಡಿಸಿ ಕಚೇರಿವರೆಗೆ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಬಿಗಿ ಪೊಲೀಸ್ ಭದ್ರತೆ: ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ವಿನಯ ಕುಲಕರ್ಣಿ, ಆರ್. ಬಿ ತಿಮ್ಮಾಪುರ, ಶಾಸಕಿ ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಫಿರೋಜ್ ಸೇಠ್ ಸೇರಿದಂತೆ ಕೈ ನಾಯಕರು ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಓದಿ: 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ' ಎಂದು ಘೋಷಣೆ ಕೂಗಿದ ಕಾಂಗ್ರೆಸ್ ಕಾರ್ಯಕರ್ತರು