ಚಿಕ್ಕೋಡಿ: ನಾವು ಮುಂಬೈ ಕರ್ನಾಟಕದವರು, ಮುಂಬೈ ನಮ್ಮದು. ನಮ್ಮ ಭಾಗದ ಜನತೆಗೆ ಮುಂಬೈ ಮೇಲೆ ಹಕ್ಕಿದೆ ಎಂದು ಉದ್ಧವ್ ಠಾಕ್ರೆಗೆ ಡಿಸಿಎಂ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೊರಗಾಂವ ಗ್ರಾಮದ ಬಸ್ ತಂಗುದಾಣ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಮುಂಬೈ ಮೇಲೆ ನಮಗೂ ಹಕ್ಕಿದೆ. ಅದಕ್ಕೆ ಈಗಿನಿಂದಲೇ ಬೇಡಿಕೆ ಇಡಲು ಪ್ರಾರಂಭ ಮಾಡುತ್ತೇವೆ. ಮುಂಬೈಯನ್ನು ಕರ್ನಾಟಕಕ್ಕೆ ಸೇರಿಸಬೇಕು. ನಮ್ಮ ಹಕ್ಕು ಸಿಗುವವರೆಗೂ ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಬೇಕು ಎಂದು ಕೇಂದ್ರಕ್ಕೆ ಒತ್ತಾಯ ಮಾಡುತ್ತೇನೆ. ನಾವು ಮುಂಬೈ ಕೇಳಿದ ಮೇಲೆ ಎಲ್ಲವೂ ಸರಿ ಹೋಗುತ್ತೆ ಎಂದರು.
ಅರವಿಂದ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅರವಿಂದ ಪಾಟೀಲ್ ಎಲ್ಲೇ ಹೋಗಲಿ, ಏನೇ ಮಾಡಲಿ. ಮುಂದಿನ ಬಾರಿ ಭಾರತೀಯ ಜನತಾ ಪಕ್ಷದಿಂದಲೇ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ. ಎಂಇಎಸ್ನಲ್ಲಿರುವವರನ್ನೆಲ್ಲ ಬಿಜೆಪಿಗೆ ಸೇರಿಸಿಕೊಂಡು ಎಂಇಎಸ್ ಮುಗಿಸುತ್ತೇವೆ ಎಂದರು.