ಬೆಳಗಾವಿ: ಕರ್ನಾಟಕದ ಜನತೆಗೆ ಕೊರೊನಾ ಲಸಿಕೆಯನ್ನು ಉಚಿತವಾಗಿ ಹಂಚುತ್ತೇವೆ ಎಂದು ಡಿಸಿಎಂ ಡಾ. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಧಮ್ ಇದ್ರೆ ರಾಜ್ಯ ಸರ್ಕಾರ ಕೊರೊನಾ ಲಸಿಕೆಯನ್ನು ಉಚಿತವಾಗಿ ಹಂಚುತ್ತೇವೆ ಎಂದು ಹೇಳಲಿ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯರ ಸವಾಲಿಗೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಡಿಸಿಎಂ ತಿರುಗೇಟು ನೀಡಿದರು. ಬಡವರು ಹಾಗೂ ಶ್ರೀಮಂತರು ಎಂಬ ಭೇದ ಇಲ್ಲದೆ ಸರ್ಕಾರವೇ ಚಿಕಿತ್ಸೆ ನೀಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಆದ್ರೆ ಕೊರೊನಾ ಲಸಿಕೆ ಇನ್ನೂ ಬಂದಿಲ್ಲ. ಬಂದಾಗ ರಾಜ್ಯದ ಜನತೆಗೆ ಉಚಿತವಾಗಿ ಹಂಚುತ್ತೇವೆ. ಬಿಹಾರ ಜನತೆಗೆ ಧೈರ್ಯ ತುಂಬುವ ಕಾರಣ ಪ್ರಣಾಳಿಕೆಯಲ್ಲಿ ಕೊರೊನಾ ಲಸಿಕೆ ಉಚಿತವಾಗಿ ಹಂಚುವುದಾಗಿ ಹೇಳಿದ್ದೇವೆ. ಪ್ರತಿಪಕ್ಷದ ನಾಯಕರು ಈ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಹೀಗಾಗಿ ನಾವೂ ಕೂಡ ಉಚಿತವಾಗಿ ಲಸಿಕೆ ಹಂಚುತ್ತೇವೆ ಎಂದರು.
ಸಿದ್ದುಗೆ ಡಿಸಿಎಂ ಗುದ್ದು:
ಪದವಿ ಕಾಲೇಜು ಆರಂಭಕ್ಕೆ ವಿರೋಧ ವ್ಯಕ್ತಪಡಿಸಿರುವ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ ಡಿಸಿಎಂ, ಅವರು ಕೂಡ ಸಿಎಂ ಆಗಿದ್ದರು. ಈ ರೀತಿ ಹೇಳಿಕೆ ನೀಡಬಾರದಿತ್ತು. ವಿದ್ಯಾರ್ಥಿಗಳ ಭಾವನೆ ಅರಿತು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಯೇ ಕಾಲೇಜು ಆರಂಭಿಸುತ್ತಿದ್ದೇವೆ. ಆನ್ಲೈನ್, ಆಫ್ಲೈನ್ ಎರಡೂ ವ್ಯವಸ್ಥೆಗಳಿವೆ. ಪೋಷಕರು - ವಿದ್ಯಾರ್ಥಿಗಳು ತಮಗೆ ಬೇಕಾದ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲಿ. ಇದಕ್ಕಾಗಿ ಮಾರ್ಗಸೂಚಿಯನ್ನು ಸಹ ಹಾಕಿಕೊಂಡಿದ್ದೇವೆ. ಸರ್ಕಾರದ ನಿರ್ಧಾರವನ್ನು ವಿದ್ಯಾರ್ಥಿಗಳು, ಪೋಷಕರು ಸ್ವಾಗತಿಸಿದ್ದು, ನವೆಂಬರ್ 17ರಿಂದ ರಾಜ್ಯಾದ್ಯಂತ ಪದವಿ ಕಾಲೇಜು ಆರಂಭಿಸುತ್ತೇವೆ ಎಂದರು.
ಪ್ರತಿಪಕ್ಷದವರು ಎಲ್ಲಾ ವಿಷಯಕ್ಕೂ ವಿರೋಧ ಮಾಡುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಯಾವುದನ್ನು ಕೂಡ ಸರಿಯಾಗಿ ನಿಭಾಯಿಸಿಲ್ಲ. ಈಗ ನಮಗೆ ಬುದ್ಧಿ ಹೇಳುವುದನ್ನು ಬಿಡಬೇಕು. ಪ್ರವಾಹ ಪೀಡಿತ ಪ್ರದೇಶಗಳಿಗೂ ಸಹ ಅವರು ಭೇಟಿ ನೀಡಿಲ್ಲ ಎಂದ ಡಿಸಿಎಂ, ನಾವು ಸಂತ್ರಸ್ತರ ಪರವಾಗಿದ್ದೇವೆ ಎಂದರು.
ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ. ಆರ್.ಆರ್ ನಗರದಲ್ಲಿನ ಗುಂಡಾಗಿರಿ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಶಾಂತ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದರು.