ಚಿಕ್ಕೋಡಿ: ಗಡಿ ಜಿಲ್ಲೆಯಾದ ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತರ ಮಳೆ ಆಗುತ್ತಿರುವುದರಿಂದ ಇದಿರಂದ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಛಾವಣಿ ಸೋರಲಾರಂಭಿಸಿದ್ದು, ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ಅದರಲ್ಲೂ ಪಟ್ಟಣದ ಸಮುದಾಯ ಆಸ್ಪತ್ರೆಗೆ ಹೆರಿಗೆಗೆಂದು ಆಗಮಿಸುವ ಗರ್ಭಿಣಿಯರು ತಂಪಾದ ವಾತಾವರಣದಿಂದ ಆಡಳಿತ ಮಂಡಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ ಒಳ ರೋಗಿಗಳು ಮತ್ತು ಹೊರ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ಜೊತೆಗೆ ಇಲ್ಲಿ ಗರ್ಭಿಣಿಯರು ಹೆರಿಗೆಗೆ ಬರುವವರ ಸಂಖ್ಯೆಯೂ ದ್ವಿಗುಣ. ಸದ್ಯ ಮಳೆಗಾಲದಲ್ಲಿ ಬೆಚ್ಚಗೆ ಇರಬೇಕಿದ್ದ ಬಾಣಂತಿ ಮತ್ತು ಶಿಶುಗಳಿಗೆ ಈ ಆಸ್ಪತ್ರೆಯಲ್ಲಿ ಆ ವಾತಾವರಣವಿಲ್ಲವಾಗಿದೆ. ಆಸ್ಪತ್ರೆ ಸೋರುತ್ತಿದ್ದ ಪರಿಣಾಮ ತಂಪಾದ ವಾತಾವರಣ ನಿರ್ಮಾಣವಾಗಿದೆ ಎಂದು ಜನರು ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಎರಡನೇ ಮಹಡಿಯಲ್ಲಿ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆ ವಿಭಾಗ ಇರುವ ಮಹಡಿಯ ಛಾವಣಿ ಸೋರುತ್ತಿದ್ದು, ಬಕೆಟ್, ಬುಟ್ಟಿ ಇಟ್ಟು ನೀರು ಆಸ್ಪತ್ರೆಗ ನುಗ್ಗದಂತೆ ಸಿಬ್ಬಂದಿ ಪರದಾಟ ನಡೆಸಿದ್ದಾರೆ.
ಈ ವ್ಯವಸ್ಥೆ ಕುರಿತು ಸಾಮಾಜಿಕ ಹೋರಾಟಗಾರಾದ ದೇವಮಾಣೆ ಹಿರೇಕೋಡಿ ಮಾತನಾಡಿ, ಈ ಆಸ್ಪತ್ರೆಯಲ್ಲಿನ ಛಾವಣಿ ಸೋರುತ್ತಿದ್ದು ರೋಗಿಗಳಿಗೆ ತುಂಬಾ ಸಮಸ್ಯೆ ಉಂಟಾಗಿದೆ. ಇಲ್ಲಿಯ ಹೆರಿಗೆ ಕಟ್ಟಡದಲ್ಲೂ ನೀರು ಸೋರುತ್ತಿದೆ. ರೋಗಿಗಳು, ಸಿಬ್ಬಂದಿ ಕಾಲು ಜಾರಿ ಬೀಳುವ ಪರಿಸ್ಥಿತಿ ಇದೆ. ಆದ್ಧರಿಂದ ಸರ್ಕಾರ ಹಾಗೂ ಜಿಲ್ಲಾ ವೈದ್ಯಾಧಿಕಾರಿಗಳು ಜನ ಸಾಮಾನ್ಯರಿಗೆ ಒಳ್ಳೆಯ ಸೇವೆ ಕೊಡುವಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಒತ್ತಾಯ ಮಾಡಿದರು.
ಹೆರಿಗೆ ಬಂದಿರುವ ಮಹಿಳೆಯ ಸಂಬಂಧಿಕರಾದ ರಾಮುಗೌಡ ಪಾಟೀಲ್ ಮಾತನಾಡಿ, ಈ ಆಸ್ಪತ್ರೆಯಲ್ಲಿ ಮಳೆಯಿಂದ ಛಾವಣಿ ಸೋರುತ್ತಿದೆ. ಇದರಿಂದ ಇಲ್ಲಿ ಹೆರಿಗೆಗೆ ಎಂದು ಬರುವ ಗರ್ಭಿಣಿಯರಿಗೆ ತೊಂದರೆ ಆಗುತ್ತದೆ, ಬಾಣಂತಿಯರಿಗೆ ಮತ್ತು ನವಜಾತ ಶಿಶುಗಳಿಗೆ ಬೆಚ್ಚಗಿನ ವಾತಾವರಣ ಬೇಕು ಇಲ್ಲಿ ನೋಡಿದರೆ ಸಂಪೂರ್ಣ ಆಸ್ಪತ್ರೆ ತಂಪಾಗಿದೆ. ನಮ್ಮಂತಹ ಬಡವರು ಸರ್ಕಾರಿ ಆಸ್ಪತ್ರೆಗಳನ್ನು ನಂಬಿಕೊಂಡು ಬಂದಿರುತ್ತೇವೆ ಇನ್ನು ಮುಂದೆ ಯಾರಿಗೂ ಈ ರೀತಿ ತೊಂದರೆ ಆಗದಂತೆ ಸರ್ಕಾರ ಹಾಗೂ ಅಧಿಕಾರಿಗಳು ಆದಷ್ಟು ಬೇಗನೆ ಈ ದವಾಖಾನೆ ದುರಸ್ತಿ ಮಾಡಲಿ ಎಂದು ಒತ್ತಾಯ ಮಾಡಿದರು.
ಇದಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಸಮುದಾಯ ಆಸ್ಪತ್ರೆಯ ವೈದಾಧಿಕಾರಿ ಸಂತೋಷ್ ಪ್ರತಿಕ್ರಿಯಿಸಿ, ಈ ಆಸ್ಪತ್ರೆಯಲ್ಲಿ ಕೇವಲ ಎರಡು ಸ್ಥಳದಲ್ಲಿ ಛಾವಣಿ ಸೋರುತ್ತಿದೆ, ಆಸ್ಪತ್ರೆ ಅಭಿವೃದ್ಧಿಗೋಸ್ಕರ ಮೇಲ್ಭಾಗದಲ್ಲಿ ಮತ್ತೊಂದು ಕಟ್ಟಡವನ್ನು ಕಟ್ಟಲಾಗುತ್ತಿದೆ, ನೂತನ ಕಟ್ಟಡದ ಛಾವಣಿ ಪೂರ್ಣಗೊಂಡ ಬಳಿಕ ಈ ಸೋರುವಿಕೆ ನಿಲ್ಲುತ್ತದೆ, ಸದ್ಯ ಸೋರುತ್ತಿರುವ ಮಳೆ ನೀರನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗುವುದು, ರೋಗಿಗಳಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ಬಾಣಂತಿಯರಿಗೆ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಬಾಣಂತಿ ಸಾವು : ಖಾಸಗಿ ಆಸ್ಪತ್ರೆ ಎದರು ಕುಟುಂಬಸ್ಥರಿಂದ ಪ್ರತಿಭಟನೆ