ಚಿಕ್ಕೋಡಿ: ತಾಲೂಕಿನಲ್ಲಿ ಕಳೆದ ಒಂದು ವಾರದ ಹಿಂದೆ ಸುರಿದ ಧಾರಾಕಾರ ಮಳೆಯಿಂದಾಗಿ ಜಮೀನಿಗೆ ನೀರು ನುಗ್ಗಿದ ಪರಿಣಾಮ ಬೆಳೆಗಳೆಲ್ಲವೂ ನಾಶವಾಗಿದ್ದು, ಉಳಿದ ಬೆಳೆಯಾದರೂ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿ ರೈತರು ಪಂಪ್ ಸೆಟ್ ಮೂಲಕ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.
ತಾಲೂಕಿನ ಉತ್ತರ ಭಾಗದಲ್ಲಿ ಸುಮಾರು 300 ಎಕರೆಯಷ್ಟು ಭೂ ಪ್ರದೇಶ ಸಂಪೂರ್ಣವಾಗಿ ಮಳೆನೀರಿನಿಂದ ಜಲಾವೃತವಾಗಿದೆ. ರೈತರು ಹಗಲು-ರಾತ್ರಿಯೆನ್ನದೆ ಕಷ್ಟಪಟ್ಟು ದುಡಿದು ಸಾಲಸೂಲ ಮಾಡಿ ಬೆಳೆಯುವ ಬೆಳೆ ರೈತನ ಕೈಗೆ ಸಿಗದೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಚಿಕ್ಕೋಡಿ ತಾಲೂಕಿನ ಕಲ್ಲೋಳ, ಮಾಂಜರಿ, ಯಡೂರ, ಇಂಗಳಿ, ಚಂದೂರ, ಅಂಕಲಿ ಸೇರಿದಂತೆ ನದಿ ತೀರದ ಗ್ರಾಮಗಳ ಜಮೀನುಗಳಲ್ಲಿ ನೀರನ್ನು ಹೊರ ತೆಗೆಯಲು ಪ್ರತಿಯೊಬ್ಬ ರೈತ ಪಂಪ್ ಸೆಟ್‌ಗಳ ಮೂಲಕ ನದಿಗೆ ಲಿಫ್ಟ್ ಮಾಡುತ್ತಿದ್ದಾನೆ. ಹಲವಾರು ಬಾರಿ ಸ್ಥಳೀಯ ಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ನದಿ ತೀರದ ಗ್ರಾಮದ ಜಮೀನುಗಳಿಗೆ ನೀರು ನದಿಗೆ ಹೋಗುವಂತೆ ಪೈಪ್‌ಲೈನ್ ಮಾಡಿಕೊಡಿ ಎಂದು ಹೇಳಿದರು ರೈತರ ಕಡೆ ಗಮನ ಕೊಡುತ್ತಿಲ್ಲವಂತೆ.
ಇದು ಇಂದು ನಿನ್ನೆಯ ತೊಂದರೆಯಲ್ಲ. ಹಲವಾರು ವರ್ಷಗಳಿಂದ ನದಿ ತೀರದ ಜನರು ಅನುಭವಿಸುವಂತ ತೊಂದರೆಯಾಗಿದ್ದು, ಬೆಳೆದ ಬೆಳೆ ಕೈಗೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ನದಿ ತೀರದ ಜಮೀನುಗಳಲ್ಲಿ ನೀರು ನಿಲ್ಲುತ್ತಿದ್ದು, ನದಿಗೆ ಹೋಗುವಂತೆ ಮಾಡಿಕೊಡಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.