ಬೆಳಗಾವಿ: ದೇಶ ಕಾಯುವ ಯೋಧನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಕುಟುಂಬ ಸಮೇತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿರುವ ಯೋಧ ನ್ಯಾಯಕ್ಕಾಗಿ ಜಿಲ್ಲಾಧಿಕಾರಿ ಅವರ ಮೊರೆ ಹೋಗಿದ್ದಾರೆ.
ಜಮೀನು ವ್ಯಾಜ್ಯ ಹಿನ್ನೆಲೆ, ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮಸ್ಥರು ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿದ್ದಾರೆ. ಸದ್ಯ ಜಮ್ಮು ಕಾಶ್ಮೀರದಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿರುವ ದೀಪಕ್ ಪಾಟೀಲ ಕುಟುಂಬಕ್ಕೆ ಕಳೆದ ಆರು ತಿಂಗಳಿಂದ ಬಹಿಷ್ಕಾರ ಹಾಕಲಾಗಿದೆ. ಯೋಧನ ಜಮೀನಿನಲ್ಲಿ ಕೆಲಸಕ್ಕೆ ತೆರಳದಂತೆ ತಾಕೀತು ಮಾಡಲಾಗಿದೆ. ಹೆಂಡತಿ, ಮಕ್ಕಳನ್ನು ಯಾರಾದರೂ ಮಾತನಾಡಿಸಿದರೆ 1000 ರೂ. ದಂಡ ವಿಧಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ ಎಂದು ಗೌಂಡವಾಡ ಗ್ರಾಮದ ಪಂಚಕಮಿಟಿ ವಿರುದ್ಧ ಯೋಧ ದೀಪಕ್ ಪಾಟೀಲ್ ಆರೋಪಿಸಿದ್ದಾರೆ.
ಏನಿದು ವಿವಾದ?
ಯೋಧ ದೀಪಕ್ ಅವರ ಸಂಬಂಧಿ (ಸ್ನೇಹ ಸಂಬಂಧ) ಅಶೋಕ್ ಕೇದಾರಿ ಪಾಟೀಲ್ ಹಾಗೂ ಊರಿನ ಪಂಚ ಕಮಿಟಿ ಮಧ್ಯೆ ಜಮೀನು ವಿವಾದ ಇದೆ. ಯೋಧನ ಸಂಬಂಧಿಗೆ ಸೇರಿದ ಜಮೀನು ಗಣಪತಿ, ಕಲ್ಲೇಶ್ವರ, ಕಾಲಭೈರವ ದೇವಸ್ಥಾನಕ್ಕೆ ಸೇರಿದ್ದು ಎಂದು ಗ್ರಾಮಸ್ಥರು ವಾದಿಸುತ್ತಿದ್ದಾರೆ. ಆದರೆ ಜಮೀನು ತಮ್ಮ ಸಂಬಂಧಿಗೆ ಸೇರಿದ ಬಗ್ಗೆ ದಾಖಲೆ ಇವೆ ಎಂಬುದು ಯೋಧ ದೀಪಕ್ ಅವರ ವಾದ. ಈ ಪ್ರಕರಣ ಈಗಾಗಲೇ ಕೋರ್ಟ್ ಮೆಟ್ಟಿಲೇರಿದೆ. ಸುಮಾರು ಐದು ಎಕರೆ ಜಮೀನು ಸಂಬಂಧ ಹಲವು ವರ್ಷಗಳಿಂದ ವಿವಾದ ಇದೆ.
ಯೋಧನ ಮನೆ ಮೇಲೆ ದಾಳಿ:
ಈ ಪ್ರಕರಣ ಸಂಬಂಧ ಗ್ರಾಮಸ್ಥರು 2020ರ ನವೆಂಬರ್ 30ರಂದು ಯೋಧನ ಮನೆ ಮೇಲೆ ದಾಳಿ ಮಾಡಿದ್ದರು. ಇದೀಗ ಜೂನ್ 6ರಂದು ಮತ್ತೆ ಯೋಧನ ಮನೆಗೆ ನುಗ್ಗಿ ದಾಂಧಲೆ ನಡೆಸಲಾಗಿದೆ. ಗೌಂಡವಾಡ ಗ್ರಾಮದ ಪಂಚಕಮಿಟಿ ಹಾಗೂ ಇತರೆ 50 ರಿಂದ 60 ಜನರ ತಂಡದಿಂದ ದಾಳಿ ಮಾಡಲಾಗಿದೆ. ಯೋಧ ದೀಪಕ್‌ಗೆ ಸೇರಿದ ರೈಸ್ ಮಿಲ್ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿ ದಾಂಧಲೆ ನಡೆಸಲಾಗಿದೆ. ಅಲ್ಲದೇ ಈ ಗುಂಪು ಮನೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆಂದು ಆರೋಪಿಸಿದ್ದು, ಈ ಕುರಿತು 16 ಜನರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅರುಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ; ಸಚಿವ ಯೋಗೇಶ್ವರ್ ಗೈರು
ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲವೆಂದು ಯೋಧನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ನ್ಯಾಯ ಕೊಡಿಸುವಂತೆ ಕುಟುಂಬ ಸಮೇತ ಬೆಳಗಾವಿ ಡಿಸಿ ಕಚೇರಿಗೆ ಆಗಮಿಸಿದ್ದೇನೆ. ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಯೋಧ ದೀಪಕ್ ಪಾಟೀಲ್ ಮನವಿ ಮಾಡಿದ್ದಾರೆ.