ಬೆಳಗಾವಿ: ಅಥಣಿ ತಾಲೂಕಿನ ಸುಟ್ಟಟ್ಟಿಯಿಂದ ಕೊಕಟನೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸುಮಾರು 18 ವರ್ಷಗಳಿಂದ ರಸ್ತೆ ಕಾಮಗಾರಿ ನಡೆಸಿಲ್ಲ ಎಂಬ ಅರೋಪಗಳು ಕೇಳಿಬಂದಿವೆ. ದಿನ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಜನರು ಪ್ರಾಣ ಭಯದಿಂದ ಸಂಚರಿಸುವ ವಾತಾವರಣ ಸೃಷ್ಟಿಯಾಗಿದೆ.
ಅಥಣಿ ತಾಲೂಕಿನ ಕೊನೆಯ ಹಳ್ಳಿಯಾಗಿರುವ ಕಾರಣ ಈ ರಸ್ತೆ ಬಗ್ಗೆ ಅಧಿಕಾರಿಗಳು ಮತ್ತು ಸ್ಥಳೀಯ ಪ್ರಭಾವಿ ನಾಯಕ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ. ನಿತ್ಯ ನೂರಾರು ವಿದ್ಯಾರ್ಥಿಗಳು ನಾಲ್ಕು ಕಿಲೋ ಮೀಟರ್ ದೂರ ಇರುವ ಶಾಲೆಗೆ ಹದಗೆಟ್ಟ ರಸ್ತೆಯಲ್ಲೇ ಸೈಕಲ್ ಮೂಲಕ ಸಂಚರಿಸುತ್ತಾರೆ.
ಕೊಕಟನೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದರೆ ಇದೇ ರಸ್ತೆ ಮೂಲಕ ತೆರಳಬೇಕು. ಗರ್ಭಿಣಿಯರನ್ನು ಹಾಗೂ ವಯೋವೃದ್ಧರನ್ನು ಕರೆದುಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಅದರಲ್ಲೂ ಜಿಂಜರ್ವಾಡ-ಸುಟ್ಟಟ್ಟಿ ರಸ್ತೆ ಎಂದರೆ 108 ಆಂಬುಲೆನ್ಸ್ ನವರು ಬರಲು ಹಿಂದೇಟು ಹಾಕುತ್ತಿದ್ದಾರೆ.
ಮಳೆಯಾದರೆ ಈ ರಸ್ತೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತೆ. ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ರಿಪೇರಿ ಮಾಡದಿದ್ದರೆ ಸುಟ್ಟಟ್ಟಿ ಹಾಗೂ ಜಿಂಜರ್ವಾಡ ಗ್ರಾಮಸ್ಥರು ಉಪ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.