ಬೆಳಗಾವಿ: 1970ರಲ್ಲಿ ಅತೃಪ್ತ ಶಾಸಕರ ಹಠದಿಂದ ವೀರೇಂದ್ರ ಪಾಟೀಲ್ ನೇತೃತ್ವದ ಸರ್ಕಾರ ಉರಳಿತ್ತು. ಇಂದೂ ಕೂಡ ಅತೃಪ್ತ ಶಾಸಕರ ಹಠದಿಂದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮೈತ್ರಿ ಸರ್ಕಾರ ಉರಳಿದೆ. ವಿಶೇಷ ಅಂದ್ರೆ ಅಂದು ವೀರೇಂದ್ರ ಪಾಟೀಲ್ ಅಧಿಕಾರದಿಂದ ಕೆಳಗಿಳಿದಿದ್ದು ಅಂದಿನ ರಾಯಬಾಗ ಕ್ಷೇತ್ರದ ಶಾಸಕ ವಸಂತರಾವ್ ಪಾಟೀಲ್ ಅವರ ಹಠದಿಂದ. ಇಂದು ಎಚ್‍ಡಿಕೆ ಸರ್ಕಾರ ಉರಳಿದ್ದು ಬೆಳಗಾವಿಯ ರಮೇಶ ಜಾರಕಿಹೊಳಿ ಹಠದಿಂದಲೇ.
ಜಿಲ್ಲಾ ರಾಜಕಾರಣದಲ್ಲಿ ಈ ಇಬ್ಬರೂ ಗುರುಶಿಷ್ಯರು. ವಸಂತರಾವ್ ಗರಡಿಯಲ್ಲೇ ರಮೇಶ ಜಾರಕಿಹೊಳಿ ರಾಜಕೀಯ ಕಲಿತಿದ್ದಾರೆ ಎಂಬುವುದು ವಿಶೇಷ. 1970ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂಸ್ಥಾ ಕಾಂಗ್ರೆಸ್ ನೇತೃತ್ವ ವಹಿಸಿದ್ದ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದರು. ಈ ಸರ್ಕಾರದಲ್ಲಿ ಮಂತ್ರಿ ಆಗಿದ್ದ ರಾಯಬಾಗದ ಶಾಸಕ ವಸಂತರಾವ್ ಪಾಟೀಲ್, ಗದಗಿನ ಕೆ.ಎಚ್. ಪಾಟೀಲ್ ಹಾಗೂ ವಿಜಯಪುರದ ಬಿ.ಐ ಪಾಟೀಲ್ ಅಂದಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ವಿರುದ್ಧ ಸಿಡಿದೆದ್ದರು.
ಕೊನೆಗೂ ಈ ಮೂವರು ಒಳಗೊಂಡ 14 ಜನ ಅತೃಪ್ತ ಶಾಸಕರು ಸಂಸ್ಥಾ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ವಿಶ್ವಾಸಮತ ಸಾಬೀತು ಪಡಿಸುವಲ್ಲಿ ಅಂದು ವಿಫಲರಾಗಿದ್ದ ವೀರೇಂದ್ರ ಪಾಟೀಲ್ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅತೃಪ್ತರೆಲ್ಲರೂ ಅಂದು ಇಂದಿರಾ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು. ಆಗ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆದು ದೇವರಾಜ ಅರಸು ಸಿಎಂ ಆಗಿದ್ದು ಇತಿಹಾಸ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿ, ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಮ್ಯಾಜಿಕ್ ಸಂಖ್ಯೆಯಷ್ಟು ಸ್ಥಾನ ಪಡೆದಿರಲಿಲ್ಲ. ಬಿ.ಎಸ್. ಯಡಿಯೂರಪ್ಪ ಸಿ.ಎಂ ಆದರೂ ಬಹುಮತ ಸಾಬೀತು ಮಾಡಲಾಗದೇ ರಾಜೀನಾಮೆ ನೀಡಿದ್ದರು.
ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳ ನೇತೃತ್ವ ವಹಿಸಿದ್ದ ಎಚ್.ಡಿ.ಕೆ, ಸಿಎಂ ಆಗಿ 14 ತಿಂಗಳ ಅಧಿಕಾರ ನಡೆಸಿದರು. ಮೈತ್ರಿ ಸರ್ಕಾರದ ಭಾಗವಾಗಿದ್ದ ಜಾರಕಿಹೊಳಿ ಸಹೋದರರು ಹಾಗೂ ಹೆಬ್ಬಾಳ್ಕರ್ ನಡುವಿನ ಪ್ರತಿಷ್ಠೆ ಕಣವಾಗಿದ್ದ ಹಾಗೂ ರಾಜ್ಯದ ಗಮನ ಸೆಳೆದಿದ್ದ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ, ಸಚಿವ ಡಿಕೆಶಿ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‍ಗೆ ಬೆಂಬಲವಾಗಿ ನಿಂತಿದ್ದರು. ಇದರ ಜತೆಗೆ ಬೆಳಗಾವಿಗೆ ಸಂಬಂಧಿಸಿದ ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಜಿಲ್ಲಾ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜಾರಕಿಹೊಳಿ ಸಹೋದರರು ಅಸಮಾಧಾನಗೊಂಡು ಡಿಕೆಶಿ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದರು.
ಈ ಸಂಬಂಧ ಜಾರಕಿಹೊಳಿ ಸಹೋದರರು ಹೈಕಮಾಂಡ್‍ಗೂ ದೂರು ನೀಡಿದ್ದರು. ಈ ಕಾರಣಕ್ಕಾಗಿ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಮೈತ್ರಿ ಸರ್ಕಾರದ ವಿರುದ್ಧ ಸಿಡಿದೆದ್ದರು. ನಂತರದ ದಿನದಲ್ಲಿ ಮಂತ್ರಿ ಸ್ಥಾನ ಕಳೆದುಕೊಂಡ ರಮೇಶ ಜಾರಕಿಹೊಳಿ ಕಾಂಗ್ರೆಸ್ ಜತೆಗಿನ ಅಂತರ ಮತಷ್ಟು ಹೆಚ್ಚಾಯಿತು. ಹೀಗಾಗಿ ಅತೃಪ್ತರನ್ನು ತನ್ನತ್ತ ಸೆಳೆದ ರಮೇಶ ಜಾರಕಿಹೊಳಿ ಇದೀಗ ಎಚ್‍ಡಿಕೆ ನೇತೃತ್ವದ ಮೈತ್ರಿ ಸರ್ಕಾರವನ್ನು ಉರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುಶಿಷ್ಯರ ಹಠಮಾರಿತನ ರಾಜ್ಯದ ಇಬ್ಬರು ಸಿ.ಎಂಗಳು ಕೆಳಗಿಳಿದಿದ್ದು, ಬೆಳಗಾವಿ ಜಿಲ್ಲಾ ರಾಜಕಾರಣದ ಹೊಸ ಇತಿಹಾಸ ಎಂದೇ ಅಲ್ಲಿ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.