ಬೆಳಗಾವಿ: ಸುಪ್ರೀಂಕೋರ್ಟ್ ಹಾಗೂ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಂದು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಲಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ಆರೋಪದಡಿ 2020ರ ನವೆಂಬರ್ 5ರಂದು ಇವರು ಹಿಂಡಲಗಾ ಜೈಲು ಸೇರಿದ್ದರು.
ನಿನ್ನೆ ಸಂಜೆ ಆರು ಗಂಟೆಯೊಳಗೆ ಕೋರ್ಟ್ ಆದೇಶದ ಪ್ರತಿ ಸಿಗದ ಕಾರಣ ಜಾಮೀನು ಸಿಕ್ಕರೂ ಜೈಲಿನಲ್ಲಿಯೇ ರಾತ್ರಿ ಕಳೆಯುವಂತಾಗಿತ್ತು. ಇಂದು ಬೆಳಗ್ಗೆ 9 ಗಂಟೆಗೆ ಕೋರ್ಟ್ ಆದೇಶ ಪ್ರತಿಯೊಂದಿಗೆ ವಿನಯ್ ಪರ ವಕೀಲರು ಜೈಲಿಗೆ ಆಗಮಿಸಲಿದ್ದಾರೆ. ಜೈಲಿನ ಪ್ರಕ್ರಿಯೆಗಳೆಲ್ಲವೂ ಮುಗಿದ ಬಳಿಕ ವಿನಯ್ ಕುಲಕರ್ಣಿ ಬಿಡುಗಡೆ ಆಗಲಿದ್ದಾರೆ.
ಬಿಡುಗಡೆ ಸಂದರ್ಭದಲ್ಲಿ ಬೆಂಬಲಿಗರು, ಅಭಿಮಾನಿಗಳು ಹೆಚ್ಚಿನ ಪ್ರಮಾಣದಲ್ಲಿ ಜೈಲಿನ ಆವರಣಕ್ಕೆ ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ, ಅಧಿಕ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.