ಬೆಳಗಾವಿ : ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದ ಸರ್ಕಾರಿ ಶಾಲೆಗೆ ಸುಸಜ್ಜಿತ ಕಟ್ಟಡ ಇಲ್ಲವೆಂದು ಪೋಷಕರು ಟೆಂಟ್ ನಿರ್ಮಿಸಿ, ಅಲ್ಲೇ ಮಕ್ಕಳಿಗೆ ಪಾಠ ಮಾಡುವಂತೆ ಪಟ್ಟು ಹಿಡಿದಿದ್ದರು. ಇದೀಗ ರಾಮದುರ್ಗ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ್ ಶಾಲೆಗೆ ಭೇಟಿ ನೀಡಿದ್ದು, ಪೋಷಕರ ಮನವೊಲಿಕೆಗೆ ಯತ್ನಿಸಿದರು.
ಮುದೇನೂರು ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿದ ಹಿನ್ನೆಲೆ ಪೋಷಕರು ಶಾಲಾ ಆವರಣದಲ್ಲಿ ಟೆಂಟ್ ನಿರ್ಮಿಸಿದ್ದರು. ಸ್ಥಳಕ್ಕೆ ಆಗಮಿಸಿದ ಬಿಇಒಗೆ ಪೋಷಕರು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಪಾಲಕರನ್ನು ಮಾತುಕತೆಗೆ ರಾಮದುರ್ಗ ತಹಶೀಲ್ದಾರ್ ಆಹ್ವಾನಿಸಿದರು. ಆಗ ಮಕ್ಕಳು ಕುಳಿತಿರುವ ಟೆಂಟ್ ಬಳಿ ಆಗಮಿಸುವಂತೆ ಪೋಷಕರು ಪಟ್ಟು ಹಿಡಿದರು. ಇಲ್ಲೇ ಬನ್ನಿ, ಏನ್ ಸಮಸ್ಯೆ ಹೇಳಿ ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ್ ಕೋರಿದರು.
ಇದನ್ನೂ ಓದಿ:ಶಾಲಾ ಕೊಠಡಿಗಳು ಶಿಥಿಲಾವಸ್ಥೆ: ಮೈದಾನದಲ್ಲಿ ಟೆಂಟ್ ಹಾಕಿ ತರಗತಿಗೆ ಪಟ್ಟುಹಿಡಿದ ಗ್ರಾಮಸ್ಥರು
ಆದ್ರೆ, ಪೋಷಕರು ಮಾತ್ರ ಅವರಿರುವ ಸ್ಥಳಕ್ಕೆ ಬಂದು ಅವರ ಅಹವಾಲು ಆಲಿಸುವಂತೆ ಆಗ್ರಹಿಸಿದರು. ಬೆಳಗ್ಗೆಯಿಂದ ಮಕ್ಕಳು ಬಿಸಿಲಿನಲ್ಲಿ ಕುಳಿತಿದ್ದಾರೆ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದರು. ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಕ್ಕೆ ಪೋಷಕರು ಪಟ್ಟು ಹಿಡಿದ ಹಿನ್ನೆಲೆ ಮೊದಲ ದಿನ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಂದರೂ ತರಗತಿ ನಡೆಯಲಿಲ್ಲ.