ಚಿಕ್ಕೋಡಿ: ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ, ಅನಾರೋಗ್ಯದಿಂದ ನಿಧನ ಹೊಂದಿದ್ದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಯೋಧ ವಿಕ್ರಮ ಪರಶುರಾಮ ಭಂಡಾರೆ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.
ಒಂಬತ್ತು ವರ್ಷಗಳಿಂದ ಬಿಎಸ್‌ಎಫ್ ಯೋಧರಾಗಿ ವಿಕ್ರಮ ಡಾರ್ಜಿಲಿಂಗ್ನ ಶಿಲಿ ಗಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಫೆ.14ರಂದು ಅನಾರೋಗ್ಯದಿಂದ ನಿಧನ ಹೊಂದಿದ್ದರು. ದೆಹಲಿ ಮೂಲಕ ಅವರ ಪಾರ್ಥಿವ ಶರೀರವನ್ನು ಮಂಗಸೂಳಿಗೆ ತಂದು ಪಂಚಾಯತಿ ಕಚೇರಿ ಮುಂದೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ದೆಹಲಿಯಿಂದ ಬಂದಿದ್ದ ಸೈನಿಕರು, ಸ್ಥಳೀಯ ಪೊಲೀಸರು, ಅಥಣಿ ಡಿವೈಎಸ್ಪಿ ಗಿರೀಶ್, ಉಪತಹಶೀಲ್ದಾರ್ ಮುಲ್ಲಾ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪೂಜಾರಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಮರ ಪಾಟೀಲ, ಸಂಜಯ ತಳವಲಕರ ಮೊದಲಾದವರು ಗೌರವ ಸಲ್ಲಿಸಿದರು.
ಸೈನಿಕನ ತಂದೆ, ತಾಯಿ, ಪತ್ನಿ, ಪುತ್ರ, ಪುತ್ರಿ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಗೌರವಾರ್ಥವಾಗಿ ಗ್ರಾಮದ ಎಲ್ಲಾ ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಮೃತ ಸೈನಿಕನಿಗೆ ಗೌರವ ಸಲ್ಲಿಸಿದರು.