ಬೆಳಗಾವಿ: ಲಿಂಗಾಯತ ಸಮುದಾಯದ ಮತ ಬ್ಯಾಂಕ್ ನೋಡಿಕೊಂಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಮಾಡಿದ್ದಾರೆ. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುವ ಅನಿವಾರ್ಯತೆ ಇದೆ. ಹೀಗಾಗಿ, ಅವರ ಆಯ್ಕೆ ಮಾಡಿರಬಹುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ಕೂಡ ಒಂದು ಕಾರಣ. ಇನ್ನು ಬಿಜೆಪಿಯಲ್ಲೂ ಮಕ್ಕಳಿಗೆ, ಮೊಮ್ಮಕ್ಕಳಿಗೆ ಸ್ಥಾನಮಾನ ನೀಡುವ ಪರಿಪಾಠ ಶುರುವಾಗಿದೆ. ನಮ್ಮಲ್ಲಿ ಮುಂಚೆಯಿಂದನೂ ಇದೆ. ಈಗ ಬಿಜೆಪಿಯಲ್ಲಿ ಶುರುವಾಗಿದೆ. ನಮ್ಮನ್ನು ಬಿಜೆಪಿಯವರು ಟೀಕೆ ಮಾಡುತ್ತಿದ್ದರು. ಆದರೆ ಹತ್ತು ವರ್ಷಗಳಿಂದ ಬಿಜೆಪಿಯಲ್ಲೂ ಅದು ಜಾರಿಗೆ ಬಂದಿದೆ ಎಂದು ಛೇಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಆಯ್ಕೆ ವಿಚಾರಕ್ಕೆ ಅವರ ಪಕ್ಷಕ್ಕೆ ಅನುಕೂಲ ಆಗಲಿ ಅಂತಾ ಮಾಡಿದ್ದಾರೆ. ಯಡಿಯೂರಪ್ಪ ಮಾತ್ರ ಅವರಲ್ಲಿ ಪ್ರಬಲ ನಾಯಕ. ಅವರನ್ನು ಬಿಟ್ಟು ಯಾರನ್ನೇ ಮಾಡಿದ್ರೂ ಅವರಿಗಿದ್ದ ಆಕರ್ಷಣೆ ಯಾರಿಗೂ ಬರಲ್ಲ. ನಮ್ಮಲ್ಲಿ ಸಿದ್ದರಾಮಯ್ಯ ಅವರು ಆ ರೀತಿ ಆಕರ್ಷಣೆ ಹೊಂದಿದ್ದಾರೆ. ಒಂದೊಂದು ಪಕ್ಷದಲ್ಲಿ ಒಬ್ಬೊಬ್ಬರು ಆಕರ್ಷಣೆ ಇರ್ತಾರೆ. ಯಡಿಯೂರಪ್ಪ ರೀತಿ ವಿಜಯೇಂದ್ರ ಆಕರ್ಷಣೆ ಇಲ್ಲ ಎಂದರು.
ವಿಜಯೇಂದ್ರ ಯಡಿಯೂರಪ್ಪ ಅವರ ರೀತಿ ನಾಯಕತ್ವ ಬೆಳೆಸಿಕೊಳ್ಳಬೇಕು. ಯಡಿಯೂರಪ್ಪ ಅವರ ಮಗ ಅಂದ ಕೂಡಲೇ ಎಲ್ಲಾ ಅವರೊಂದಿಗೆ ಬರುವುದಿಲ್ಲ. ವಿಜಯೇಂದ್ರ ಬಹಳಷ್ಟು ಕಲಿಯಬೇಕಿದೆ, ಹೋಗಬೇಕಿದೆ. ಇನ್ನೂ ಗುರುತಿಸಿಕೊಳ್ಳಬೇಕಿದೆ, ಪಕ್ಷ ಇನ್ನೂ ಸಹಕಾರ ಮಾಡಬೇಕಿದೆ. ಬಿಜೆಪಿಯಲ್ಲಿ ಅಸಮಾಧಾನ ಏಳುವ ಸಾಧ್ಯತೆ ಇದೆ ಎಂಬ ಪ್ರಶ್ನೆಗೆ, ಪಕ್ಷ ಅಂದ ಮೇಲೆ ಮೂರು ಗುಂಪುಗಳು ಇದ್ದೇ ಇರ್ತವೆ. ಒಂದನ್ನು ಸಮಾಧಾನ ಮಾಡಿದ್ರೇ ಎರಡು ದೂರ ಹೋಗುತ್ತೆ. ಅದನ್ನ ಬ್ಯಾಲೆನ್ಸ್ ಮಾಡುವ ಶಕ್ತಿ ಅವರಿಗೆ ಇರಬೇಕು ಎಂದರು.
ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗ್ತಾರೆ, ಡಿಸಿಎಂ ಆಗ್ತಾರೆ ಅನ್ನೋ ವಿಚಾರಕ್ಕೆ, ಸದ್ಯಕ್ಕೆ ಯಾವ ಚರ್ಚೆ ಇಲ್ಲ. ಎಲ್ಲರೂ ಚುನಾವಣೆಯಲ್ಲಿ ಬ್ಯುಜಿಯಾಗಿದ್ದಾರೆ. ಅದೇನೇ ಇದ್ದರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಅಂತಹ ಚರ್ಚೆ ಈಗ ಸದ್ಯಕ್ಕೆ ನಡೆಯುತ್ತಿಲ್ಲ. ಚುನಾವಣೆ ಮುಗಿದ ಮೇಲೆ ಏನಾಗುತ್ತೆ ನೋಡಬೇಕು ಎಂದರು.
ಸಿಎಂ ಬದಲಾವಣೆ ಆದ್ರೇ ವಾಲ್ಮೀಕಿ ಸಮುದಾಯದವರಿಗೆ ಕೊಡಬೇಕು ಎನ್ನುವ ಪ್ರಶ್ನೆಗೆ, ಆ ರೀತಿ ಇಲ್ಲ ಅಂತಾ ನಾವು ಸ್ಪಷ್ಟ ಪಡಿಸಿದ್ದೇವೆ. ಸಮುದಾಯದಿಂದ ಬೇಡಿಕೆ ಇಡುತ್ತಾರೆ. ಆದರೆ ಪಕ್ಷದ ತೀರ್ಮಾನ ಬೇರೆ ಇರುತ್ತೆ ಎಂದು ಸತೀಶ ಜಾರಕಿಹೊಳಿ ಹೇಳಿದರು.
ಡಿಕೆ ಶಿವಕುಮಾರ್ ಮತ್ತು ಸತೀಶ್ ನಡುವೆ ಹೊಂದಾಣಿಕೆ ಆಗಿದೆ ಅನ್ನೋ ವಿಚಾರಕ್ಕೆ, ಹೊಂದಾಣಿಕೆ ಆಗುವ ಪ್ರಶ್ನೆ ಇಲ್ಲ. ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕು, ನಮ್ಮ ಹಂತದಲ್ಲಿ ಏನೂ ಇಲ್ಲ. ನಾವು ಯಾವುದನ್ನೂ ಕ್ಲೈಮ್ ಮತ್ತು ಡಿಮ್ಯಾಂಡ್ ಇಟ್ಟಿಲ್ಲ. ಡಿಕೆ ಶಿವಕುಮಾರ್ ನಮ್ಮ ಮನೆಗೆ ಸುಮಾರು ಸರಿ ಬಂದಿದ್ದಾರೆ. ಪಕ್ಷದ ವಿಚಾರ ಮತ್ತು ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಆಗಿದೆ. ಮೈಸೂರು ಹೋಗುವ ಉದ್ದೇಶ ಬೇರೆ, ಅವರು ಭೇಟಿಯಾದ ಉದ್ದೇಶ ಬೇರೆ. ಹೊಂದಾಣಿಕೆ ಅನ್ನುವ ಪ್ರಶ್ನೆ ಇಲ್ಲ ಎಂದರು.
ಅಂಜಲಿ ನಿಂಬಾಳ್ಕರ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ನೀಡ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅಂಜಲಿ ನಿಂಬಾಳ್ಕರ್ ಕ್ಲೈಮ್ ಮಾಡಿದ್ದಾರೆ. ಅವರಿಗೆ ಕೊಟ್ಟರೆ ಬಹಳ ಒಳ್ಳೆಯದಾಗುತ್ತೆ. ನಮ್ಮ ಭಾಗದ ಮಹಿಳೆಗೆ ಕೊಡೊದ್ರಿಂದ ಅನುಕೂಲ. ನಾವು ಕೂಡ ಅವರಿಗೆ ಕಾರ್ಯಾಧ್ಯಕ್ಷ ಮಾಡಬೇಕು ಅಂತಾ ಮನವಿ ಮಾಡಿದ್ದೇವೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದರು.
ಪಂಚರಾಜ್ಯ ಚುನಾವಣೆಗಳಲ್ಲಿ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮಧ್ಯಪ್ರದೇಶ ಮತ್ತು ಛತ್ತೀಸಗಡದಲ್ಲಿ ಗೆಲುತ್ತೇವೆ. ರಾಜಸ್ಥಾನದಲ್ಲಿ ನಮಗೆ ಅವಕಾಶ ಇದೆ, ಫೈಟ್ ಇರುವುದು ತೆಲಂಗಾಣದಲ್ಲಿ, ಕೆಸಿಆರ್ ಪಾರ್ಟಿ ಮತ್ತು ಕಾಂಗ್ರೆಸ್ ನಡುವೆ ಫೈಟ್ ಇದೆ. ಕಳೆದ ಬಾರಿ ಮಧ್ಯಪ್ರದೇಶದಲ್ಲಿ ಗೆದ್ರೂ ಆಪರೇಷನ್ ಕಮಲದಿಂದ ಸೋಲಬೇಕಾಯಿತು. ಅಲ್ಲಿ ವಿರೋಧಿ ಅಲೆ ಮತ್ತೆ ಜಾಸ್ತಿ ಆಗಿದ್ದು ಹೀಗಾಗಿ, ಮಧ್ಯಪ್ರದೇಶದಲ್ಲೂ ಗೆಲ್ತೇವಿ. ಎಲ್ಲ ಗೆದ್ದರೆ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತೆ. ಇದು ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತೆ. ನಾಲ್ಕೈದು ತಿಂಗಳಲ್ಲಿ ಚುನಾವಣೆ ಇದ್ದು ಹೀಗಾಗಿ ಪರಿಣಾಮ ಬೀರುತ್ತೆ ಎಂದರು.
ಇದನ್ನೂ ಓದಿ: ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನಿರೀಕ್ಷಿಸಿರಲಿಲ್ಲ, ಅವಕಾಶ ಕೇಳಿಯೂ ಇರಲಿಲ್ಲ: ಯಡಿಯೂರಪ್ಪ