ಬೆಳಗಾವಿ: ಐದು ವರ್ಷದ ಬಾಲಕಿ ಬಸ್ ಕಿಟಕಿಯಲ್ಲಿ ಕೈ ಹಾಕಿದಾಗ ಮತ್ತೊಂದು ವಾಹನಕ್ಕೆ ಸಿಲುಕಿ ತುಂಡಾಗಿದ್ದ ಕೈಯನ್ನು ವಿಜಯಾ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಮರುಜೋಡಣೆ ಮಾಡಿದ್ದಾರೆ ಎಂದು ವಿಜಯಾ ಆರ್ಥೋ ಮತ್ತು ಟ್ರಾಮಾ ಸೆಂಟರ್ನ ನಿರ್ದೇಶಕ ಡಾ. ರವಿ ಪಾಟೀಲ ಹೇಳಿದ್ದಾರೆ.
ನಗರದಲ್ಲಿ ಇಂದು ವಿಜಯಾ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2019ರಲ್ಲಿ ಪೀರನವಾಡಿ ಗ್ರಾಮದ ಬಾಲಕಿ ಅಫಿಯಾ ಶೇಖ್, ಬಸ್ನಲ್ಲಿ ಸಂಚರಿಸುವಾಗ ಮಳೆಯ ನೀರನ್ನು ಕೈಯಲ್ಲಿ ಹಿಡಿಯಲು ಹೋದಾಗ ಎದುರುಗಡೆ ಬರುತ್ತಿದ್ದ ವಾಹನಕ್ಕೆ ತಾಗಿ ಕೈ ತುಂಡಾಗಿತ್ತು. ತಕ್ಷಣ ಬಾಲಕಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ತುಂಡರಿಸಿದ ಬಾಲಕಿ ಕೈ ಮರುಜೋಡಣೆ ಮಾಡಲು ವಿಜಯಾ ಆಸ್ಪತ್ರೆಯ ನಿರ್ದೇಶಕ ರವಿ ಪಾಟೀಲ ಮಾರ್ಗದರ್ಶನದಲ್ಲಿ ಹಲವು ವೈದ್ಯರ ತಂಡ ಸತತ 10 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಬಾಲಕಿ ಕೈ ಮರುಜೋಡಿಸಲು ಯಶಸ್ವಿಯಾಗಿದ್ದರು. ಚಿಕಿತ್ಸೆ ನೀಡಿ ಇದೀಗ ಒಂದು ವರ್ಷ ಕಳೆದಿದ್ದು, ಬಾಲಕಿ ಕೈ ಈಗ ಸಂಪೂರ್ಣ ಮೊದಲಿನಂತಾಗಿದೆ.
ಕತ್ತರಿಸಿದ ಕೈ, ಕಾಲುಗಳನ್ನು 3 ಗಂಟೆ ಅವಧಿಯಲ್ಲಿ ಆಸ್ಪತ್ರೆಗೆ ಕರೆತಂದ್ರೆ ಮರುಜೋಡಣೆ: ಅಪಘಾತ ಸೇರಿದಂತೆ ಇತರ ಪ್ರಕರಣಗಳಲ್ಲಿ ಸಾರ್ವಜನಿಕರು ಕೈ, ಬೆರಳು, ಕಾಲು ಮತ್ತು ದೇಹದ ಇತರ ಭಾಗಗಳನ್ನು ಕಟ್ ಆದರೆ ಅವುಗಳನ್ನು ಮರುಜೋಡಣೆ ಮಾಡಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸಾರ್ವಜನಿಕರು ಕೈ,ಕಾಲು ದೇಹದ ಇತರೆ ಭಾಗಗಳು ಕಟ್ ಆದ 3 ಗಂಟೆ ಸಮಯದೊಳಗೆ ಆಸ್ಪತ್ರೆಗೆ ಕರೆತರಬೇಕು. ಇದರಿಂದ ಅವುಗಳನ್ನು ಮರುಜೋಡಣೆ ಮಾಡಲು ಸಾಧ್ಯವಾಗುತ್ತದೆ ಎಂದರು.