ಬೆಳಗಾವಿ: ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಗೆ ನಗರದ ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ 450ಕ್ಕೂ ಅಧಿಕ ಮಂದಿ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಶಾಶ್ವತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಜನರು ಮನವಿ ಮಾಡಿದ್ದಾರೆ.
ಮಳೆ ನೀರಿಗೆ ಸಾಯಿನಗರ, ಲಕ್ಷ್ಮೀನಗರ, ಮಂಗಾಯಿನಗರ, ಮಲಪ್ರಭಾನಗರ, ಸಿದ್ಧಾರೂಢನಗರ ಸೇರಿದಂತೆ ವಡಗಾವಿ ಗಲ್ಲಿಯ ಮನೆಗಳು ಜಲಾವೃತವಾಗಿ ನೂರಾರು ಕುಟುಂಬಗಳು ಅತಂತ್ರಗೊಂಡಿವೆ. ಹೀಗಾಗಿ ಜಿಲ್ಲಾಡಳಿತದಿಂದ ಯಡಿಯೂರಪ್ಪ ಮಾರ್ಗದಲ್ಲಿ ಬರುವ ಸಾಯಿ ಭವನದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ಆಶ್ರಯ ನೀಡಿ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರತಿವರ್ಷ ಇದೇ ಸಮಸ್ಯೆ:
ಈ ವೇಳೆ ಮಾತನಾಡಿದ ಸಂತ್ರಸ್ತರು, ಪ್ರತಿವರ್ಷವೂ ನಮಗೆ ಇದೇ ರೀತಿ ಸಮಸ್ಯೆ ಉದ್ಭವಿಸುತ್ತಿದೆ. ಹೀಗಾಗಿ ಮನೆಗಳಿಗೆ ಬಳ್ಳಾರಿ ನಾಲಾ ನೀರು ಬರದಂತೆ ನಮಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿದರು.
ನಿರಾಶ್ರಿತ ಕೇಂದ್ರಕ್ಕೆ ಶಾಸಕ ಅಭಯ್ ಪಾಟೀಲ್ ಭೇಟಿ:
ನಿರಾಶ್ರಿತ ಕೇಂದ್ರಕ್ಕೆ ಶಾಸಕ ಅಭಯ್ ಪಾಟೀಲ್ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದರು. ಬಳಿಕ ಶಾಶ್ವತ ಪರಿಹಾರದ ಭರವಸೆ ನೀಡಿದರು. ಈ ವೇಳೆ ವ್ಯಾಕ್ಸಿನ್ ಪಡೆಯದವರು ಕಡ್ಡಾಯವಾಗಿ ಕೋವಿಡ್ ಲಸಿಕೆ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕರು, ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಸಾವಿರಾರು ಮನೆಗಳು ನೀರಿನಲ್ಲಿ ಮುಳುಗಿದ್ದು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಇದರಿಂದ ಸಾಕಷ್ಟು ಸಮಸ್ಯೆಯಾಗಿ ನೂರಾರು ಜನರು ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಕೆಲವರು ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿದ್ದಾರೆ. ಒಟ್ಟಾರೆ 4 ಸಾವಿರಕ್ಕೂ ಹೆಚ್ಚಿನ ಜನರು ತೊಂದರೆಗೆ ಸಿಲುಕಿದ್ದಾರೆ. ಅಧಿಕಾರಿಗಳ ತಪ್ಪಿನಿಂದ ಜನರು ಸಂಕಷ್ಟ ಸಿಲುಕುತ್ತಿದ್ದಾರೆ. ನಾಳೆ ಸಿಎಂ ಬಂದ್ರೆ ಅವರ ಗಮನಕ್ಕೆ ಈ ವಿಚಾರಕ್ಕೆ ತರುವ ಮೂಲಕ ಪರಿಹಾರಕ್ಕೆ ಪ್ರಯತ್ನ ಮಾಡಲಾಗುವುದು ಎಂದರು.