ಬೆಳಗಾವಿ : ಪ್ರಧಾನಮಂತ್ರಿ ಪ್ರಕಟಿಸಿರುವ ಉಚಿತ ಲಸಿಕಾ ಕಾರ್ಯಕ್ರಮದ ಅನ್ವಯ ಜಿಲ್ಲೆಯಾದ್ಯಂತ ಸೋಮವಾರದಿಂದ ಕೋವಿಡ್ ನಿರೋಧಕ ಲಸಿಕೆ(ವ್ಯಾಕ್ಸಿನ್) ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ತಿಳಿಸಿದ್ದಾರೆ.
45 ವರ್ಷ ಮೇಲ್ಪಟ್ಟವರು ಮಾತ್ರ ಮೇಳದಲ್ಲಿ ಲಸಿಕೆಯನ್ನು ಪಡೆಯಬಹುದು. ಜಿಲ್ಲಾಸ್ಪತ್ರೆ, ಎಲ್ಲ ತಾಲೂಕು ಆಸ್ಪತ್ರೆ, ಜಿಲ್ಲೆಯ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು. ಆರೋಗ್ಯ ಉಪ ಕೇಂದ್ರಗಳ ವ್ಯಾಪ್ತಿಯಲ್ಲಿ ಇರುವ ಶಾಲೆಗಳಲ್ಲಿ ಕೂಡ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದಲ್ಲದೇ ಬೃಹತ್ ಕೈಗಾರಿಕೆಗಳು, ಕಾರ್ಖಾನೆಗಳಲ್ಲಿ ಕೂಡ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಆನ್ಲೈನ್ ನೋಂದಣಿ ಮಾಡಿಕೊಂಡವರಿಗೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಆಗಮಿಸಿ ಸ್ಥಳದಲ್ಲಿಯೇ ನೋಂದಣಿ ಮಾಡಿಸುವವರಿಗೆ ಲಸಿಕೆಯನ್ನು ನೀಡಲಾಗುವುದು. 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಮೇಳದಲ್ಲಿ ಲಸಿಕೆ ನೀಡಲಾಗುತ್ತದೆ. ಇನ್ನುಳಿದಂತೆ ಆದ್ಯತಾ ಗುಂಪಿನ 18 ರಿಂದ 45 ವರ್ಷದೊಳಗಿನವರಿಗೆ ಯಥಾ ಪ್ರಕಾರ ಲಸಿಕಾ ಕಾರ್ಯಕ್ರಮ ನಡೆಯಲಿದೆ.
ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆಯ ಜತೆಗೆ ಇತರೆ ಗುರುತಿನ ದಾಖಲೆಯೊಂದಿಗೆ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದು. ಜಿಲ್ಲೆಯಲ್ಲಿ ಸದ್ಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಲಸಿಕೆ ಲಭ್ಯವಿರುವುದರಿಂದ 45 ವರ್ಷ ಮೇಲ್ಪಟ್ಟವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.