ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯನವರೇ ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಿಎಂ ಮಾತನಾಡಿದನ್ನು ರೆಕಾರ್ಡ್ ಮಾಡಿಸಿ ಆಡಿಯೋ ಲೀಕ್ ಮಾಡಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೊಸಬಾಂಬ್ ಸಿಡಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯನವರಿಗೆ ಎಲ್ಲ ಪಕ್ಷಗಳಲ್ಲಿ ಸ್ನೇಹಿತರಿದ್ದಾರೆ. ಅವರೇ ಆಡಿಯೋ ಏಕೆ ಲೀಕ್ ಮಾಡಿಸಿರಬಾರದು? ಸಭೆಯಲ್ಲಿ ಲಕ್ಷ್ಮಣ ಸವದಿ, ನಳಿನ್ ಕುಮಾರ್ ಕಟೀಲ್, ಬಸವರಾಜ್ ಬೊಮ್ಮಾಯಿ ಮಾತ್ರ ಇದ್ದರು ಎಂಬುವುದು ಸಿದ್ದರಾಮಯ್ಯಗೆ ಹೇಗೆ ಗೊತ್ತಾಯಿತು? ಮಿಮಿಕ್ರಿ ಕಲಾವಿದರ ಸಂಖ್ಯೆ ಜಾಸ್ತಿ ಇದೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಮನೆಯಲ್ಲಿ ಕುಳಿತು ಆಡಿಯೋ ರೆಕಾರ್ಡ್ ಮಾಡಿಸಿರಬಹುದು ಎಂದು ಕೈ ನಾಯಕರ ವಿರುದ್ಧ ಆರೋಪ ಮಾಡಿದರು.
ನೆರೆ ಪರಿಹಾರದಲ್ಲಿ ಸರ್ಕಾರ ವಿಫಲ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸೋಮಣ್ಣ, ನಿನ್ನೆ ರಾತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಫೋನ್ ಮಾಡಿದ್ರು. ನಾವೆಲ್ಲ ಒಂದೇ ಕಂಪನಿಯಲ್ಲಿ ಇದ್ದವರು. ಬಾಗಲಕೋಟೆ ಸಭೆ ಬಗ್ಗೆ ಮಾತನಾಡಿದ್ರು. ಪ್ರವಾಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಬೇಡಿ. ಪ್ರಕೃತಿ ಮುನಿಸಿನಿಂದ ಹಾನಿಯಾಗಿದೆ. ಸಿದ್ದರಾಮಯ್ಯ ಸಿದ್ದರಾಮಯ್ಯನಾಗೇ ಇರಿ. ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡಬೇಡಿ ಎಂದು ಫೋನ್ನಲ್ಲಿ ಹೇಳಿದ್ದೇನೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪಾದಯಾತ್ರೆ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂಬ ಪ್ರಶ್ನೆಗೆ, ಮಾಡಲಿ ಬಿಡಿ, ಅವರ ಬಿಪಿ, ಶುಗರ್ ಕಡಿಮೆ ಆದ್ರು ಆಗುತ್ತೆ. ಸಿದ್ದರಾಮಯ್ಯ ಈಗ ಸಿದ್ದರಾಮಯ್ಯ ಆಗಿ ಉಳಿದಿಲ್ಲ. ಅವರಲ್ಲಿ ಭಯ, ಭೀತಿ ಹೆಚ್ಚಾಗಿದೆ. ಅವರ ಭಾಷೆ ಈ ರೀತಿ ಆಗಬಾರದು. ಅವರ ಅವಧಿಯಲ್ಲಿ ಏನ್ನೆಲ್ಲ ಆಗಿದೆ ಎಂಬುದು ಗೊತ್ತು. ಈಗ ಅದನ್ನು ಹೇಳುವುದು ಬೇಡ. ನೆರೆ ಪೀಡಿತ ಜನರಿಗೆ ಪುನರ್ ಜೀವನ ಕಲ್ಪಿಸಬೇಕಿದೆ ಎಂದು ಹೇಳಿದರು.