ಚಿಕ್ಕೋಡಿ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಸ್ಫೂರ್ತಿಯಿಂದಲೇ ಯುಪಿಎಸ್‌ಸಿಯಲ್ಲಿ 680ನೇ ರ್‍ಯಾಂಕ್ ಬಂದು ಪಾಸಾಗಿರುವೆ ಎಂದು ಪ್ರಿಯಾಂಕಾ ಕಾಂಬಳೆ ಈಟಿವಿ ಭಾರತಗೆ ತಿಳಿಸಿದರು.
ಚಿಕ್ಕೋಡಿ ಪಟ್ಟಣದ ಅಂಬೇಡ್ಕರ್ ನಗರದ 24 ವರ್ಷದ ಪ್ರಿಯಾಂಕಾ ಕಾಂಬಳೆಯವರು ಕಡು ಬಡತನದಲ್ಲಿ ಹುಟ್ಟಿ ಬೆಳೆದು ಬಂದಿದ್ದಾರೆ. ಕನ್ನಡ ಶಾಲೆಯಲ್ಲಿ ಕಲಿತು ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯನ್ನು ಚಿಕ್ಕೋಡಿಯಲ್ಲಿ ಮುಗಿಸಿದರು. ನಂತರ ಪದವಿ ವಿದ್ಯಾಭ್ಯಾಸವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮುಗಿಸಿ, ದೆಹಲಿಯಲ್ಲಿ ಎರಡುವರೆ ವರ್ಷ ತರಬೇತಿ ಪಡೆದು ಎರಡನೇ ಬಾರಿಯ ಪ್ರಯತ್ನದಲ್ಲಿಯೇ ಯುಪಿಎಸ್‌ಸಿಯಲ್ಲಿ ತೇರ್ಗಡೆಯಾಗಿದ್ದಾರೆ.
ಪ್ರಿಯಾಂಕಾ ಅವರ ತಂದೆ ವಿಠ್ಠಲ ಕಾಂಬಳೆ ಅವರು ಫಾರೆಸ್ಟ್ ಗಾರ್ಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ಮನೆಗೆಲಸ ಮಾಡುತ್ತಾರೆ. ಇವರಿಗೆ ಮೂವರು ಮಕ್ಕಳಿದ್ದು, ಪ್ರಿಯಾಂಕಾ ಎರಡನೇಯವರು. ಇವರು ಮೊದಲೇ ಬಡತನದಲ್ಲಿ ಹುಟ್ಟಿದ್ದರಿಂದ ಏನಾದರೂ ಸಾಧನೆ ಮಾಡಬೇಕು ಎನ್ನುವ ಛಲವನ್ನು ಚಿಕ್ಕವಯಸ್ಸಿನಿಂದ ಇಟ್ಟುಕೊಂಡಿದ್ದರು. ಇವರಿಗೆ ಭಾರತ ರತ್ನ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಪ್ರೇರಣೆ, ಸ್ಫೂರ್ತಿ ಅಂತಾ ಈಟಿವಿ ಭಾರತ ಜೊತೆಗೆ ಮನದಾಳ ಹಂಚಿಕೊಂಡಿದ್ದಾರೆ.