ಬೆಳಗಾವಿ: ಲಾಕ್ಡೌನ್ನಿಂದ ಜಿಲ್ಲೆಯಲ್ಲಿ ಸಿಲುಕಿಕೊಂಡಿರುವ ಉತ್ತರ ಪ್ರದೇಶದ ಕೂಲಿ ಕಾರ್ಮಿಕರಿಗೆ ರೈಲು ಬಿಡುತ್ತಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೂರಾರು ಕೂಲಿ ಕಾರ್ಮಿಕರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಬೆಳಗಾವಿಯಲ್ಲಿ ರೈಲು ಸೇವೆ ಆರಂಭಿಸಲಾಗಿತ್ತು. ಅದರಂತೆ ನಾವು ಸಹ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಿದ್ದೇವೆ. ಆದರೆ ಅಧಿಕಾರಿಗಳು ಮಾತ್ರ ನಮಗೆ ರೈಲು ಬಿಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಈಗಾಗಲೇ ಒಂದು ರೈಲು ಬಿಡಲಾಗಿದೆ. ಕಾರ್ಮಿಕರಿಗಾಗಿ ಉಚಿತ ರೈಲು ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳಲ್ಲಿ ರೈಲು ಬಿಡುವುದಾಗಿ ಕೂಲಿ ಕಾರ್ಮಿಕರಿಗೆ ತಿಳಿಸಿದ ಬಳಿಕ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಆಡಳಿತಕ್ಕೆ ಹಿಡಿಶಾಪ ಹಾಕಿಕೊಂಡೇ ಕಾರ್ಮಿಕರು ಹಿಂದಿರುಗಿದರು.