ಚಿಕ್ಕೋಡಿ : ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಬದಲು, ಬೆಳಗಾವಿ ಲೋಕಸಭೆಗೆ ದಿವಂಗತ ಸುರೇಶ ಅಂಗಡಿ ಕುಟುಂಬದವರು ಅವಿರೋಧ ಆಯ್ಕೆಯಾಗಲು ಶ್ರಮಿಸಲಿ ಎಂದು ಹುಕ್ಕೇರಿ ಶಾಸಕ ಉಮೇಶ ಕತ್ತಿ ಹೇಳಿದರು.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರಕಾಶ ಹುಕ್ಕೇರಿ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸಿ ಬೆಳಗಾವಿ ಲೋಕಸಭೆಗೆ ಅಭ್ಯರ್ಥಿ ನಿಲ್ಲಿಸದಂತೆ ಮನವಿ ಮಾಡಲಿ. ಬೆಂಗಳೂರು ಹಾಗೂ ದೆಹಲಿಯ ನಾಯಕರ ಜೊತೆ ಚರ್ಚಿಸಿ ಆದಷ್ಟು ಬೇಗ ನಿರ್ಣಯ ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್‌ನ ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂಬ ಹೇಳಿಕೆಯಿಂದ ನನಗೆ ಸಂತೋಷವಾಗಿದೆ. ಸುರೇಶ್ ಅಂಗಡಿಯವರ ಪತ್ನಿಯನ್ನ ಇಲ್ಲಿಂದ ಆಯ್ಕೆ ಮಾಡಿ ಎಲ್ಲರೂ ಸೇರಿ ಹೊಸ ಇತಿಹಾಸ ಸೃಷ್ಟಿಸೋಣ.
ನಾವು ಕೂಡ ಸುರೇಶ್ ಅಂಗಡಿಯವರ ಪತ್ನಿಗೆ ಟಿಕೆಟ್ ನೀಡುವಂತೆ ಮನವಿ ಮಾಡುತ್ತೇವೆ. ಪ್ರಕಾಶ ಹುಕ್ಕೇರಿ ಬಿಜೆಪಿ ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇನೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸದಂತೆ ಹುಕ್ಕೇರಿ ನೋಡಿಕೊಳ್ಳಲಿ ಎಂದರು.