ಬೆಳಗಾವಿ: ರೂಬೆಲ್ಲಾ ಚುಚ್ಚುಮದ್ದು ಪಡೆದು ಮೂವರ ಮಕ್ಕಳ ಸಾವು ಪ್ರಕರಣದ ತನಿಖೆಗೆ ಇಬ್ಬರು ಹಿರಿಯ ಅಧಿಕಾರಿಗಳನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಸಚಿವ ಡಾ. ಕೆ.ಸುಧಾಕರ ಸೂಚನೆ ಮೇರೆಗೆ ತನಿಖೆಗೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
WHO ಅಧಿಕಾರಿ ಡಾ.ಸಿದ್ದಲಿಂಗಯ್ಯ ಹಾಗೂ ಬೆಳಗಾವಿ ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಪ್ರಭು ಬಿರಾದಾರ ಅವರಿಗೆ ತನಿಖೆಯ ಜವಾಬ್ದಾರಿ ವಹಿಸಲಾಗಿದೆ. ಮಕ್ಕಳಿಗೆ ಲಸಿಕೆ ನೀಡುವ ವೇಳೆ ಮಾರ್ಗಸೂಚಿ ಪಾಲನೆ ಆಗಿದೆಯೋ ಇಲ್ವೋ ಎಂಬ ಬಗ್ಗೆ ಹಾಗೂ ಕೋಲ್ಡ್ ಚೈನ್ ಬ್ರೇಕ್ ಆದ ಬಗ್ಗೆ ಅಧಿಕಾರಿಗಳಿಂದ ತನಿಖೆ ನಡೆಯಲಿದೆ.
ಓದಿ: Australian Open : ಅಮೆರಿಕದ ಮಾರ್ಕೋಸ್ ಗಿರೊನ್ ವಿರುದ್ಧ ರಾಫೆಲ್ಗೆ ಭರ್ಜರಿ ಜಯ
ಅಜಾಗರೂಕತೆಯೇ ಘಟನೆಗೆ ಕಾರಣ: ಪ್ರಕರಣ ಕುರಿತು ಮಾಹಿತಿ ನೀಡಿದ ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿ ಡಾ. ಈಶ್ವರ್ ಗಡಾದ್, ಪ್ರಾಥಮಿಕ ಆರೋಗ್ಯ ಕೇಂದ್ರದ ಐಎಲ್ಆರ್ ರೆಫ್ರಿಜರೇಟರ್‌ನಿಂದ ಲಸಿಕೆ ತೆಗೆದುಕೊಂಡು ಹೋಗಬೇಕು. ಆ ದಿನ ಎಷ್ಟು ಮಕ್ಕಳಿಗೆ ವ್ಯಾಕ್ಸಿನ್ ಮಾಡಬೇಕೋ, ಅದನ್ನು ಮಾಡಿದ ನಂತ್ರ ವಾಪಸ್ ಐಎಲ್‌ಆರ್‌ನಲ್ಲಿ ತಂದಿಡಬೇಕು. ಪ್ರತಿಯೊಂದು ಹಂತದಲ್ಲೂ ಮಾರ್ಗಸೂಚಿ ಪಾಲನೆ ಮಾಡಲು ಸಿಬ್ಬಂದಿಗೆ ಸೂಚನೆ ಇದೆ. ಇಂತಹ ಘಟನೆ ನಡೆದಿರೋದು ದುರದೃಷ್ಟಕರ. ಮಲ್ಲಾಪುರ, ಬೋಚಬಾಳ ಗ್ರಾಮದಲ್ಲಿ ಮಕ್ಕಳಿಗೆ ಎಎನ್‌ಎಮ್ ಸಲ್ಮಾ ಚುಚ್ಚುಮದ್ದು ನೀಡಿದ್ದಾರೆ. ಜನವರಿ 10ರಂದು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವ್ಯಾಕ್ಸಿನ್ ತಗೆದುಕೊಂಡು ಹೋಗಿದ್ದಾರೆ.
ಬಳಿಕ ತಮ್ಮ ಹೋಟೆಲ್‌ನ ಡೊಮೆಸ್ಟಿಕ್ ಫ್ರಿಡ್ಜ್‌ನಲ್ಲಿ ಲಸಿಕೆ ಇಟ್ಟಿದ್ದಾರೆ. ಹಾಗೇ ವ್ಯಾಕ್ಸಿನ್ಅನ್ನು ಡೊಮೆಸ್ಟಿಕ್ ಫ್ರಿಡ್ಜ್‌ನಲ್ಲಿ ಇಡಬಾರದು. ಜನವರಿ 11 ರಂದು ಮಲ್ಲಾಪುರ ಗ್ರಾಮದಲ್ಲಿ ಎರಡು ಮಕ್ಕಳಿಗೆ ಚುಚ್ಚುಮದ್ದು ನೀಡಿದ್ದು, ಅವರಲ್ಲಿ ಒಂದು ಮಗು ತೀರಿಕೊಂಡಿದೆ. ಬಳಿಕ ಜ. 12 ರಂದು ಹೊಸ ವಯಲ್‌ನಿಂದ ಬೋಚಬಾಳ ಗ್ರಾಮದಲ್ಲಿ ನಾಲ್ಕು ಮಕ್ಕಳಿಗೆ ಇಂಜೆಕ್ಷನ್ ನೀಡಿದ್ದಾರೆ. ನಾಲ್ಕು ಮಕ್ಕಳಲ್ಲಿ ಇಬ್ಬರು ತೀರಿಕೊಂಡಿದ್ದು ಇಬ್ಬರು ಚೇತರಿಸಿಕೊಳ್ಳುತ್ತಿದ್ದಾರೆ. ಡೊಮೆಸ್ಟಿಕ್ ಫ್ರಿಡ್ಜ್‌ನಲ್ಲಿ ವ್ಯಾಕ್ಸಿನ್ ಇಟ್ಟಿದ್ದರು. ಅದರಲ್ಲಿ ಆಹಾರ ಪದಾರ್ಥ ಕೂಡ ಇರುತ್ತದೆ, ಸೋಂಕು ತಗುಲಿರಬಹುದು. ಆ ಲಸಿಕೆಯನ್ನು ಪರೀಕ್ಷೆಗೆ ಕಳಿಸಿದ್ದು ವರದಿ ಬರಬೇಕಿದೆ.
ಅದೇ ಬ್ಯಾಚ್ ನ ಲಸಿಕೆ ಬೇರೆ ಗ್ರಾಮಗಳಲ್ಲಿ ನೀಡಿದ್ದು ಎಲ್ಲೂ ತೊಂದರೆ ಆಗಿಲ್ಲ. ನಿಯಮ ಸರಿಯಾಗಿ ಪಾಲಿಸದೇ ಇರುವುದರಿಂದ ಹೀಗಾಗಿರಬಹುದು ಅಂತಾ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆ ವರದಿಯನ್ನು ನಾನು ಡಿಸಿ, ಡಿಹೆಚ್‌ಒ ಗೆ ಸಲ್ಲಿಸಿದ್ದೇನೆ. ಅವರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಸಿಬ್ಬಂದಿ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ. ಮೂರು ಕಂದಮ್ಮಗಳ ಜೀವ ವಾಪಸ್ ಬರುವಂತದ್ದಲ್ಲ. ಆ ಘಟನೆ ಬಿಟ್ಟರೆ ಪಕ್ಕದ ಪಿಹೆಚ್ ಸಿಗಳಲ್ಲಿ ಲಸಿಕಾಕರಣ ಮಾಡಿದ್ದು ಎಲ್ಲೂ ಏನೂ ಆಗಿಲ್ಲ. ಮೂರು ದಿನ ಐಎಲ್ಆರ್‌ನಿಂದ ತೆಗೆದುಕೊಂಡು ಹೋಗಿದ್ದು ತಪ್ಪು. ಮಾರ್ಗಸೂಚಿ ಪಾಲನೆ ಮಾಡದೇ ಇರುವುದು ಈ ಘಟನೆಗೆ ಕಾರಣ. ಪೋಷಕರು ಆತಂಕ ಪಡುವ ಅಗತ್ಯ ಇಲ್ಲ. ನಮ್ಮ ಎಲ್ಲ ವ್ಯಾಕ್ಸಿನ್ ಸುರಕ್ಷಿತವಾಗಿವೆ. ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅತಿಹೆಚ್ಚಿನ ಮುಂಜಾಗ್ರತೆ ವಹಿಸುತ್ತೇವೆ ಎಂದು ಡಾ. ಗಡಾದ್ ಹೇಳಿದ್ರು.