ಬೆಳಗಾವಿ: ನಗರದ ಗಾಲ್ಫ್ ಕ್ಲಬ್ನಲ್ಲಿ ಅಡಗಿರೋ ಚಿರತೆ ಪತ್ತೆ ಕಾರ್ಯಾಚರಣೆ 20ನೇ ದಿನಕ್ಕೆ ಕಾಲಿಟ್ಟಿದೆ. ಚಿರತೆ ಸೆರೆಗೆ ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ ಎರಡು ಆನೆಗಳನ್ನು ಕರೆತರಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಇಂದು ಕೂಡ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ನಗರದ ಗಾಲ್ಫ್ ಮೈದಾನದ ವ್ಯಾಪ್ತಿಯಲ್ಲಿ ಒಂದು ಕಿ. ಮೀ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ, ಖಾಸಗಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಮುಂದುವರಿಸಲಾಗಿದೆ. 250 ಎಕರೆ ಪ್ರದೇಶದಲ್ಲಿ ಇರುವ ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಅಡಗಿರುವ ಚಿರತೆ ಸೆರೆಗೆ ಇಂದಿನಿಂದ ಎರಡು ಆನೆಗಳನ್ನು ಬಳಸಿಕೊಂಡು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಶಿವಮೊಗ್ಗದ ಸಕ್ರೆಬೈಲು ಬಿಡಾರದಿಂದ ನಿನ್ನೆ ಮಧ್ಯರಾತ್ರಿ ಎರಡು ಆನೆಗಳನ್ನು ಕರೆತರಲಾಗಿದೆ. ಅರ್ಜುನ್ ಮತ್ತು ಆಲೆ ಎನ್ನುವ ಎರಡು ಆನೆಗಳನ್ನು ಬಳಸಿ ಇಂದು ಕೋಂಬಿಂಗ್ ಮಾಡಲಾಗುತ್ತದೆ. ಆನೆಗಳ ಜತೆಗೆ ಡಾರ್ಟ್ ಸ್ಪೆಷಲಿಸ್ಟ್ ಡಾ.ವಿನಯ್ ಸಹ ಬೆಳಗಾವಿಗೆ ಆಗಮಿಸಿದ್ದು, ಅವರ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ.
ಇತ್ತೀಚೆಗೆ ಡಾ.ವಿನಯ್ ನೇತೃತ್ವದಲ್ಲಿ ಭದ್ರಾವತಿಯಲ್ಲಿ ಚಿರತೆ ಸೆರೆ ಹಿಡಿಯಲಾಗಿತ್ತು. ಹೀಗಾಗಿ ಅವರ ಜೊತೆಗೆ ನುರಿತ ಮಾವುತರು, ಕವಾಡಿಗಳು ಹಾಗೂ ಬೆಳಗಾವಿಯಲ್ಲಿ ಸದ್ಯ ಇರುವ ಇಬ್ಬರು ಡಾರ್ಟ್(ಈಟಿ) ಸ್ಪೆಷಲ್ ಶೂಟರ್ಸ್ ಬಳಸಿಕೊಳ್ಳಲಾಗುತ್ತಿದೆ. 80ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಜತೆಗೆ ಇಂದಿನಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಆಪರೇಷನ್ ಚಿರತೆ ವಿಫಲ: ಅರಣ್ಯಾಧಿಕಾರಿಗಳಿಂದ ತಪ್ಪಿಸಿಕೊಂಡು ಎಸ್ಕೇಪ್ ಆದ ಚೀತಾ