ಚಿಕ್ಕೋಡಿ (ಬೆಳಗಾವಿ): ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದ 36 ವರ್ಷದ ವ್ಯಕ್ತಿ ಹಾಗೂ ಶಿರಗುಪ್ಪಿ ಗ್ರಾಮದ 45 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಇವೆರಡೂ ಗ್ರಾಮಗಳ ಕೊರೊನಾ ಸೋಂಕಿತರು ನೆಲೆಸಿದ್ದ ಓಣಿಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಐನಾಪೂರ ಗ್ರಾಮದ ಕೊರೊನಾ ಸೊಂಕಿತನು ತನ್ನ ವ್ಯವಹಾರದ ಸಲುವಾಗಿ ಜೂ.13 ರಂದು ಧಾರವಾಡಕ್ಕೆ ಹೋಗಿದ್ದು, ಜೂ.17ರಂದು ಐನಾಪೂರಕ್ಕೆ ಆಗಮಿಸಿದ್ದಾನೆ. ಜುಲೈ 2ಕ್ಕೆ ಕೆಮ್ಮು, ಜ್ವರ ಹಾಗು ನೆಗಡಿ ಎಂದು ಐನಾಪೂರ ಸ್ಥಳೀಯ ಆಸ್ಪತ್ರೆಗೆ ತಪಾಸಣೆಗೆ ಹೋಗಿದ್ದಾನೆ. ಅಲ್ಲಿಯ ವೈದ್ಯರ ಸಲಹೆ ಮೇರೆಗೆ ಜುಲೈ4ನೇ ತಾರೀಕಿಗೆ ಕಾಗವಾಡ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದು ಇಂದು ಪಾಸಿಟಿವ್ ಬಂದಿದೆ.
ಶಿರಗುಪ್ಪಿ ಗ್ರಾಮದವರಿಗೆ ಮಹಾರಾಷ್ಟ್ರದ ಲಿಂಕ್ ಇದ್ದು, ಇವರು ಮಹಾರಾಷ್ಟ್ರದ ಪುಣೆಯಿಂದ ಜೂ.29ಕ್ಕೆ ಶಿರಗುಪ್ಪಿಗೆ ಆಗಮಿಸಿದ್ದಾರೆ. ಇವರನ್ನು ಸ್ಥಳೀಯ ಸರ್ಕಾರಿ ಮರಾಠಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.