ಬೆಳಗಾವಿ: ಹುಕ್ಕೇರಿ ತಾಲೂಕಿನ ಹಿರಣ್ಯಕೇಶಿ ನದಿಯ ಹಿನ್ನೀರಿನಲ್ಲಿ ರುಂಡವಿಲ್ಲದ ಬಾಲಕನ ಮೃತದೇಹ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹೊಸೂರ ಗ್ರಾಮದ ನೂರಅಹ್ಮದ್ ಕೊಣ್ಣೂರ ಮತ್ತು ಹನುಮಂತ ಬೇವನೂರ ಬಂಧಿತರು. ಹೊಸೂರ ಗ್ರಾಮದ 12 ವರ್ಷದ ಬಾಲಕ ಹತ್ಯೆಗೀಡಾಗಿದ್ದ.
ಪ್ರಕರಣದ ಹಿನ್ನೆಲೆ: ಸೆ.20ರಂದು ಮಾಳಪ್ಪ ನಾಪತ್ತೆ ಆಗಿರುವ ಬಗ್ಗೆ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದ ವೇಳೆ ಹಿರಣ್ಯಕೇಶಿ ನದಿಯ ಹಿನ್ನೀರಿನಲ್ಲಿ ರುಂಡವಿಲ್ಲದ ಶವವೊಮದು ಪತ್ತೆಯಾಗಿತ್ತು. ಬಳಿಕ ತನಿಖೆ ಆರಂಭಿಸಿದ ಪೊಲೀಸರಿಗೆ ನದಿಯಲ್ಲಿ ಬಾಲಕನ ಮೃತದೇಹ ದೊರೆತಿತ್ತು. ಬಳಿಕ ಕೊಲೆ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಒಂದೇ ವಾರದಲ್ಲಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಮೂಲತಃ ಚಿಕ್ಕೋಡಿ ತಾಲೂಕಿನ ನಾಯಿಂಗ್ಲಜ್ ಗ್ರಾಮದ ಬಾಲಕ ಶಾಲೆ ಕಲಿಯುವುದಕ್ಕಾಗಿ ಹುಕ್ಕೇರಿ ತಾಲೂಕಿನ ಹೊಸೂರ ಗ್ರಾಮದ ಅತ್ತೆ ಮನೆಯಲ್ಲಿ ವಾಸವಾಗಿದ್ದನು. ಕೊಲೆ ಪ್ರಕರಣದ ಪ್ರಮುಖ ಆರೋಪಿ ನೂರಅಹ್ಮದ್ ಕೊಣ್ಣೂರ ಬಾಲಕನ ಅತ್ತೆ ಜತೆಗೆ ಅನೈತಿಕ ಸಂಬಂಧ ಬೆಳೆಸಲು ಪ್ರಯತ್ನಿಸುತ್ತಿದ್ದನು. ಆದರೆ, ಆಕೆ ಆತನ ಬಲೆಗೆ ಬಿದ್ದಿರಲಿಲ್ಲ. ಹಾಗಾಗಿ ಸಿಟ್ಟಿನಿಂದ ನೂರ್ಅಹ್ಮದ್ ಕುಡುಗೋಲಿನಿಂದ ಬಾಲಕನನ್ನು ಹತ್ಯೆ ಮಾಡಿ ರುಂಡ ಬೇರ್ಪಡಿಸಿದ್ದನು.
ಇನ್ನು, ಸಾಕ್ಷ್ಯ ನಾಶ ಮಾಡಲು ಸ್ನೇಹಿತನಾದ ಹನುಮಂತ ಬೇವನೂರ ಎಂಬುವನ ಸಹಾಯ ಪಡೆದ ನೂರಾಹ್ಮದ್, ಬಾಲಕನ ಮೃತದೇಹವನ್ನು ಗುರುತು ಸಿಗದಂತೆ ಗೋಣಿ ಚೀಲದಲ್ಲಿ ತುಂಬಿ ಗುಡಸ್ ಗ್ರಾಮ ವ್ಯಾಪ್ತಿಯ ಹಿರಣ್ಯಕೇಶಿ ನದಿ ಹಿನ್ನೀರಿಗೆ ಎಸೆದಿದ್ದನು. ಅಲ್ಲದೇ, ಬಾಲಕ ಧರಿಸಿದ್ದ ಶಾಲಾ ಬ್ಯಾಗ್ ಮತ್ತು ಆತನ ಸೈಕಲ್‌ನ್ನು ಗ್ರಾಮದ ಬಾವಿಯೊಂದರಲ್ಲಿ ಎಸೆದು ಪರಾರಿ ಆಗಿದ್ದನು ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯ ನಡುರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಕೊಲೆ.. ಭಯಾನಕ ದೃಶ್ಯ ಸೆರೆ