ಬೆಳಗಾವಿ: ನಗರದ ಖಾಸಗಿ ಆಸ್ಪತ್ರೆಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಬ್ಬಸುಂಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಅಪರಿಚಿತ ಯುವಕನಲ್ಲ. ಬದಲಿಗೆ ಆಕೆಯ ಸ್ನೇಹಿತ ಎಂಬ ವಿಚಾರ ಬಯಲಾಗಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ತಬಸ್ಸುಂ ಸವದತ್ತಿ (19) ಮೃತ ಯುವತಿ. ಯುವತಿ ಅನುಮಾನಸ್ಪದವಾಗಿ ಸಾವನ್ನಪ್ಪಿದರು. ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಯುವತಿ ತಲೆಗೆ ಬಿದ್ದ ಗಾಯಕ್ಕೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಕರಣ ಹಿನ್ನೆಲೆ: ಬೈಲಹೊಂಗಲ ಪಟ್ಟಣದ ನಿವಾಸಿ ತಬಸ್ಸುಂ ಸವದತ್ತಿ ಬಡತನ ಹಿನ್ನೆಲೆಯಿಂದ ಬಂದಿದ್ದರು. ತಂದೆ ಆಟೋ ಓಡಿಸಿ ಜೀವನ ನಡೆಸುತ್ತಿದ್ದು, ಮಗಳನ ಕಷ್ಟಪಟ್ಟು ಸಾಧ್ಯವಾದಷ್ಟು ಓದಿಸಿದ್ದರು. ಮೃತ ಯುವತಿ ತಬಸ್ಸುಂ ಗಗನ ಸಖಿ ಆಗುವ ಕನಸು ಕಂಡಿದ್ದರು. ಆದರೆ ಬಡತನ ಹಿನ್ನೆಲೆ ಸದ್ಯ ಬೆಂಗಳೂರಿನ ಕಾಲ್‌ಸೆಂಟರ್‌ನಲ್ಲಿ ಕಳೆದ ತಿಂಗಳು ಕೆಲಸಕ್ಕೆ ಸೇರಿದ್ದರು. ಕೆಲಸ ಸರಿ ಅನಿಸದಿದ್ದಾಗ ಅ. 6ರಂದು ತಬಸ್ಸುಂ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ಬಳಿಕ ಅ.7ರಂದು ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನ ಭೇಟಿಗೆ ತೆರಳಿದ್ದರು. ಈ ವೇಳೆ, ತಬಸ್ಸುಂಗೆ ಅನಾರೋಗ್ಯ ಹಿನ್ನೆಲೆ ಗೋವಾದ ಆಸ್ಪತ್ರೆಯೊಂದರಲ್ಲಿ ಚೆಕ್‌ಅಪ್ ಮಾಡಿಸಿ ಬಳಿಕ ಆಕೆಯನ್ನು ಬೆಂಗಳೂರಿಗೆ ಕಳುಹಿಸಲು ಸ್ನೇಹಿತ ನಿರ್ಧರಿಸಿದ್ದ. ಅದರಂತೆ ಆಕೆಯ ಸ್ನೇಹಿತ ಅ. 9ರಂದು ಬೆಂಗಳೂರಿಗೆ ಹೋಗಲು ಪಣಜಿ ಬಸ್ ನಿಲ್ದಾಣಕ್ಕೆ ಬಂದಂತಹ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಿದ್ದು ತಬಸ್ಸುಂ ತಲೆಗೆ ಬಲವಾದ ಗಾಯವಾಗಿತ್ತು.
ಬಳಿಕ ಪಣಜಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿ ಚಿಕಿತ್ಸೆ ಪಡೆದು ಅ. 11ರಂದು ಆಕೆಯ ಸ್ನೇಹಿತ ತಬಸ್ಸುಂ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ. ಬಳಿಕ ಅ.11ರಂದು ಬೆಂಗಳೂರಿಗೆ ಬಂದು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ತಬಸ್ಸುಂ ಆರೋಗ್ಯ ಏರುಪೇರಾದ ಕಾರಣ ಅ. 11ರ ರಾತ್ರಿ ಬೆಂಗಳೂರಿನಿಂದ ಬೆಳಗಾವಿಗೆ ಆಕೆಯನ್ನು ಕರೆದುಕೊಂಡು ಬಂದಿದ್ದ.
ಬಳಿಕ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದ. ಆದರೆ, ಯಾವಾಗ ಪೊಲೀಸ್ ಕೇಸ್ ಆಗುತ್ತದೆ ಎಂದು ಗೊತ್ತಾಯಿತೋ ಈ ವೇಳೆ ಆಕೆಯನ್ನು ಆಸ್ಪತ್ರೆಯಲ್ಲಿ ಬಿಟ್ಟು, ಆಕೆಯ ಮೊಬೈಲ್, ಸಿಮ್ ಜೊತೆ ಗೋವಾಗೆ ಎಸ್ಕೇಪ್ ಆಗಿದ್ದಾನೆ. ಇತ್ತ ವಿಷಯ ತಿಳಿದು ಬೆಳಗಾವಿ ಜಿಲ್ಲಾಸ್ಪತ್ರೆಗೆ ತಬಸ್ಸುಂ ಕುಟುಂಬಸ್ಥರು ದೌಡಾಯಿಸಿದ್ದರು. ತಲೆಗೆ ಬಲವಾದ ಪೆಟ್ಟು ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು.
ಅದೇ ದಿನ ರಾತ್ರಿ ಯುವಕ ತಬಸ್ಸುಂ ನಂಬರ್‌ನಿಂದ ಅವಳ ತಾಯಿಗೆ ವಾಟ್ಸ್ಆ್ಯಪ್ ಮೆಸೇಜ್ ಕಳಿಸಿದ್ದ. ಮೆಸೇಜ್ನಲ್ಲಿ, "ತಬಸ್ಸುಂಳನ್ನು ಬಸ್‌ನಿಂದ ಇಳಿಸುವ ವೇಳೆ ಅವಳ ಮೊಬೈಲ್ ಒಡೆದು ಹೋಗಿದೆ. ನಿಮ್ಮ ನಂಬರ್ ನನ್ನ ಬಳಿ ಇರಲಿಲ್ಲ. ಹಾಗಾಗಿ ತಬಸ್ಸುಂ ಸಿಮ್ ನನ್ನ ಮೊಬೈಲ್‌ನಲ್ಲಿ ಹಾಕಿದ್ದೇನೆ. ತಬಸ್ಸುಂ ಫೋನ್ ಅವಳ ಚಿಕ್ಕ ಬ್ಯಾಗ್‌ನಲ್ಲಿದೆ. ಪೊಲೀಸ್ ಕಂಪ್ಲೆಂಟ್ ಆಗುತ್ತದೆ ಎಂದು ಹೋಗಿದ್ದೇನೆ. ನಾನು ಅವರ ಸಿಮ್ ಮುರಿದು ಹಾಕಿದ್ದೇನೆ. ಬೇರೆ ಸಿಮ್ ತೆಗೆದುಕೊಳ್ಳಿ. ನನಗೆ ತೊಂದರೆ ಕೊಡಬೇಡಿ" ಎಂದು ಮೆಸೇಜ್ ಮಾಡಿದ್ದ.
ಇತ್ತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ತಬಸ್ಸುಂ ನಿನ್ನೆ ಮೃತಪಟ್ಟಿದ್ದರು. ಬಳಿಕ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೋವಾಗೆ ತೆರಳಿ ತಬಸ್ಸುಂ ಸ್ನೇಹಿತನನ್ನು ವಶಕ್ಕೆ ಪಡೆದು ಬೆಳಗಾವಿಗೆ ಕರೆತಂದಿದ್ದಾರೆ. ಸದ್ಯ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಯುವತಿ ಅನುಮಾನಾಸ್ಪದ ಸಾವು: ಅತ್ಯಾಚಾರ, ಕೊಲೆ ಶಂಕೆ