ಬೆಳಗಾವಿ: ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದ 12 ಮಂದಿ ಆರೋಪಿಗಳನ್ನ ಗಡಿಪಾರು ಮಾಡಲಾಗಿದೆ. ಇವರ ವಿರುದ್ಧ 132 ಪ್ರಕರಣಗಳಿವೆ ಎಂದು ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಮಾಹಿತಿ ನೀಡಿದರು.
ಬೆಳಗಾವಿ ಜಿಲ್ಲೆಯ ಅಥಣಿ ಉಪವಿಭಾಗದಲ್ಲಿ ಮದಬಾವಿ ಗ್ರಾಮದ ಮೀರಸಾಬ್ ಬಾಗಡಿ, ರಡ್ಡೇರಹಟ್ಟಿ ಗ್ರಾಮದ ಸದಾಶಿವ ಗೊಡಮಾಲೆ, ಉಗಾರ ಬಿ.ಕೆ.ಗ್ರಾಮದ ಮಹಾದೇವ ಕಾಂಬಳೆ, ಕೋಹಳಿ ಗ್ರಾಮದ ರವಿ ಶಿಂಗೆ, ಹಾಲಳ್ಳಿ ಗ್ರಾಮದ ಕಾಶಪ್ಪ ಕಾರಿಕೊಳ್ಳ, ಕಕಮರಿ ಗ್ರಾಮದ ಪ್ರದೀಪ್ ಕರಡಿ, ಕುಡಚಿ ಗ್ರಾಮದ ಅಲಿಮುರ್ತುಜಾ ಚಮನಮಲೀಕ್, ಸಾಹೇಬಹುಸೇನ್ ಚಮನಮಲೀಕ್, ನಜೀರ್ ಹುಸೇನ್ ತಾಂಬೋಳಿ, ಮೊರಬ ಗ್ರಾಮದ ಬಾಬಾಸಾಬ್ ನದಾಫ್, ಚಿಂಚಲಿ ಗ್ರಾಮದ ಲಕ್ಷ್ಮಣ ಪೋಳ, ಅಲ್ತಾಪ್ ಹುಸೇನ ಮೇವಗಾರ ಗಡಿಪಾರಾಗಿರುವ ಆರೋಪಿಗಳು.
ಆರೋಪಿಗಳ ಮಾಹಿತಿ: ಅಥಣಿ ಉಪವಿಭಾಗದಲ್ಲಿ ಬರುವ ಅಥಣಿ, ಐಗಳಿ, ಕಾಗವಾಡ ಹಾಗೂ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜೂಜಾಟ, ಮಟಕಾ, ಸಾರಾಯಿ ಮತ್ತು ಅಕ್ರಮ ಮರಳು ಸಾಗಾಣಿಕೆಯಲ್ಲಿ ಹಾಗೂ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದ್ದರ ಬಗ್ಗೆ ಒಟ್ಟು 132 ಪ್ರಕರಣಗಳು ದಾಖಲಾಗಿದ್ದವು.
ಮದಬಾವಿ ಗ್ರಾಮದ ಮೀರಾಸಾಬ್ ಬಾಗಡಿ ಹಾಗೂ ರಡ್ಡೇರಹಟ್ಟಿ ಗ್ರಾಮದ ಸದಾಶಿವ ಗೋಡಮಾಲೆ ವಿರುದ್ಧ 5 ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಇಬ್ಬರನ್ನು ಬೆಳಗಾವಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಒಂದು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.
ಕಾಗವಾಡ ತಾಲೂಕಿನ ಉಗಾರ ಬಿ.ಕೆ.ಗ್ರಾಮದ ಮಹಾದೇವ ಯಲ್ಲಪ್ಪ ಕಾಂಬಳೆ ವಿರುದ್ಧ 5 ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ವಿಜಯಪುರ ಜಿಲ್ಲೆಗೆ ಎರಡು ತಿಂಗಳ ಕಾಲ ಗಡಿಪಾರು ಹಾಗೂ ಕೋಹಳ್ಳಿ ಗ್ರಾಮದ ರವಿ ಶಿಂಗೆ ಮೇಲೆ 4 ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಕೊಪ್ಪಳ ಜಿಲ್ಲೆಗೆ ಎರಡು ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.
ಹಾಲಳ್ಳಿ ಗ್ರಾಮದ ಕಾಶಪ್ಪ ಕಾರಿಕೊಳ್ಳ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದರಿಂದ ಹಾಲಳ್ಳಿ ಗ್ರಾಮದಿಂದ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಂದಿಗುಂದ ಗ್ರಾಮಕ್ಕೆ ಒಂದು ತಿಂಗಳ ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
ಕಕಮರಿ ಗ್ರಾಮದ ಪ್ರದೀಪ ಕರಡಿ ಅಕ್ರಮ ಮರಳು ಸಾಗಾಣಿಕೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ಕೋಲಾರ ಜಿಲ್ಲೆಗೆ ಎರಡು ತಿಂಗಳ ಕಾಲ ಗಡಿಪಾರು ಹಾಗೂ ಕುಡಚಿ ಪಟ್ಟಣದ ಅಲಿಮುರ್ತುಜಾ ಚಮನಮಲೀಕ 13 ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ ಮೂರು ತಿಂಗಳ ಕಾಲ ಗಡಿಪಾರು ಮಾಡಿದ್ದಾರೆ.
ಮೊರಬ ಗ್ರಾಮದ ಬಾಬಾಸಾಬ್ ನದಾಫ್ 21 ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ 5 ತಿಂಗಳ ಕಾಲ ಗಡಿಪಾರು ಹಾಗೂ ಕುಡಚಿ ಗ್ರಾಮದ ಸಾಹೇಬಹುಸೇನ ಚಮನಮಲೀಕ 22 ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ 6 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ.
ಇದಲ್ಲದೇ ಕುಡಿಚಿ ಪಟ್ಟಣದ ನಜೀರ್ ಹುಸೇನ ತಾಂಬೋಳ 10 ಮಟ್ಕಾ ಪ್ರಕರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ 3 ತಿಂಗಳ ಕಾಲ ಗಡಿಪಾರು ಮಾಡಲಾಗಿದೆ. ಚಿಂಚಲಿ ಗ್ರಾಮದ ಲಕ್ಷ್ಮಣ ವಸಂತ 7 ಮಟ್ಕಾ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ಯಾದಗಿರಿ ಜಿಲ್ಲೆಗೆ 3 ತಿಂಗಳ ಕಾಲ ಗಡಿಪಾರು ಮಾಡಿದ್ದಾರೆ.
ಅಲ್ತಾಪ್ ಹುಸೇನ್ ಮೇವೆಗಾರ 15 ಮಟ್ಕಾ ಪ್ರಕರಣಗಳಲ್ಲಿ ಹಾಗೂ 3 ಜೂಜಾಟ ಪ್ರಕರಣಗಳಲ್ಲಿ ಭಾಗಿಯಾಗಿದ್ದರಿಂದ ಬೆಳಗಾವಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಗೆ 6 ತಿಂಗಳ ಕಾಲ ಗಡಿಪಾರು ಮಾಡಿ ಆದೇಶ ಹೊರಡಿಸಿರುತ್ತಾರೆ.
ಉಪವಿಭಾಗದ ಅಧೀನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪದೇ ಪದೆ ಅಕ್ರಮ ಮಟಕಾ, ಜೂಜಾಟ, ಸಾರಾಯಿ, ಮರಳು ಸಾಗಾಣಿಕೆ ಹಾಗೂ ಸಮಾಜ ಘಾತುಕ ಕೃತ್ಯಗಳಲ್ಲಿ ಭಾಗಿಯಾಗುವ ಆರೋಪಿತರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇಂತಹ ಸಮಾಜ ಘಾತುಕ ಕೃತ್ಯಗಳನ್ನು ಎಸಗುತ್ತಿರುವವ ಬಗ್ಗೆ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ಗೌಪ್ಯತೆ ಕಾಪಾಡಿಕೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹಲವು ಪ್ರಕರಣಗಳಲ್ಲಿ ಭಾಗಿ: ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಶಿವಮೊಗ್ಗಕ್ಕೆ ಗಡಿಪಾರು