ಚಿಕ್ಕೋಡಿ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾಗುತ್ತಿರುವ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ತ್ವರಿತವಾಗಿ ಗುರುತಿಸಬೇಕು ಹಾಗೂ ಆಕ್ಸಿಜನ್ ಅಗತ್ಯವಿರುವ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಶುಕ್ರವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿಯ ತಹಶೀಲ್ದಾರ್ ಕಚೇರಿಯಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಹಾಗೂ ಲಕ್ಷಣರಹಿತ ಸೋಂಕಿತರ ಕ್ವಾರಂಟೈನ್ ಗೆ ಸಂಬಂಧಿಸಿದಂತೆ ಹುಕ್ಕೇರಿ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೇ ಮಾದರಿಯಲ್ಲಿ ಇತರೆ ತಾಲೂಕುಗಳಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ಲಕ್ಷಣ ರಹಿತ ಸೋಂಕಿತರಿಗೆ ತಾಲೂಕು ಮಟ್ಟದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಜಿಲ್ಲಾಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಕಲ್ಪಿಸಬೇಕು. ಕೆಲವು ಕಡೆಗಳಲ್ಲಿ ಆ್ಯಂಬುಲೆನ್ಸ್ನವರು ಅಕ್ರಮವಾಗಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು. ಹೋಮ್ ಕ್ವಾರಂಟೈನ್ನಲ್ಲಿರುವ ಸೋಂಕಿತರು ಹೊರಗಡೆ ತಿರುಗಾಡದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣದ ವರ್ತಕರು ಸಭೆ ನಡೆಸಿ, ಸ್ವಯಂಪ್ರೇರಣೆಯಿಂದ ವ್ಯಾಪಾರ-ವಹಿವಾಟು ಬಂದ್ ಮಾಡಿರುವುದಕ್ಕೆ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.