ಬೆಳಗಾವಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ಕಳೆದ 7 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಪ್ರತಿಭಟನೆ ನಡೆಸುತ್ತಿದ್ದ ನೌಕರರನ್ನು ರಾತ್ರೋರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಮುಂದಾಗಿದೆ ಎಂದು ನೌಕರರು ಆರೋಪಿಸಿದ್ದಾರೆ.
ಸರ್ಕಾರವು ಪೊಲೀಸರನ್ನು ಬಳಸಿಕೊಂಡು ನಮ್ಮನ್ನು ಒತ್ತಾಯ ಪೂರ್ವಕವಾಗಿ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ ಎಂದು ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ಸುವರ್ಣಸೌಧದ ಎದುರಿನ ಬಸ್ತವಾಡ ಪ್ರದೇಶದಲ್ಲಿ ಕಳೆದ ಏಳು ದಿನಗಳಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಪೊಲೀಸರು ಹಠಾತ್ತನೆ ಬಂದು ನಮ್ಮನ್ನು ವಶಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಾವೇನು ದೇಶ ದ್ರೋಹ ಕೆಲಸ ಮಾಡಿದ್ದೀವಾ. ನಮ್ಮ ಬೇಡಿಕೆ ಈಡೇರಿಸುವುದನ್ನು ಬಿಟ್ಟು ಸರ್ಕಾರ ನಮ್ಮನ್ನು ಹತ್ತಿಕ್ಕಲು ಪ್ರಯತ್ನ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಅಲ್ಲದೆ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸುವ ನಿಟ್ಟಿನಲ್ಲಿ, ಸೋಮವಾರ ಸ್ಥಳಕ್ಕೆ ಆಮ್ ಆದ್ಮಿ ಪಕ್ಷದ ಮುಖಂಡರಾದ ಭಾಸ್ಕರರಾವ್ ಅವರು ಸ್ಥಳಕ್ಕೆ ಭೇಟಿ ನೀಡುವವರಿದ್ದರು. ಇದಕ್ಕೂ ಮೊದಲೇ ರಾತ್ರಿ ಸಮಯದಲ್ಲಿ ಪ್ರತಿಭಟನೆಕಾರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿರುವುದು ನೌಕರರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಸಾರಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಸೂಕ್ತ ಬಂದೋಬಸ್ತ್ ಮಾಡುವಂತೆ ಠಾಣೆಗೆ ಪತ್ರ