ಬೆಳಗಾವಿ: ಲಾಕ್ಡೌನ್ನಿಂದ ಬೆಂಗಳೂರಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ತೆರಳಲು ಸಾರಿಗೆ ಇಲಾಖೆಯಿಂದ ಉಚಿತ ಬಸ್ ಸೇವೆ ಕಲ್ಪಿಸುವುದು ಅಸಾಧ್ಯ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದರು.
ವಲಸೆ ಕಾರ್ಮಿಕರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ದುಪ್ಪಟ್ಟು ದರ ವಸೂಲಿ ಮಾಡುತ್ತಿರುವ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಾರ್ಮಿಕರ ಹಿತದೃಷ್ಟಿಯಿಂದ ಸಿಂಗಲ್ ಫೇರ್ ತಗೆದುಕೊಂಡು ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಸ್‌ನಲ್ಲಿ ಕಡಿಮೆ ಜನರನ್ನು ಕಳಿಸಲಾಗುತ್ತಿದೆ. ಕಾರ್ಮಿಕರನ್ನು ಅವರ ಊರಿಗೆ ಬಿಟ್ಟು ವಾಪಸ್ ಬರುವಾಗ ಬಸ್ ಖಾಲಿ ಇರುತ್ತದೆ. ಆದರೂ ಈ ಹೊರೆ ಸಹಿಸಿಕೊಂಡು ಸಿಂಗಲ್ ಫೇರ್ ಪಡೆಯಲಾಗುತ್ತಿದೆ ಎಂದರು.
ವಲಸೆ ಕಾರ್ಮಿಕರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಕಾರ್ಮಿಕ ಇಲಾಖೆಯಿಂದ ಸಹಾಯ ಮಾಡಲಾಗಿದೆ. ಕೊರೊನಾದಿಂದ ಇಡೀ ವಿಶ್ವಕ್ಕೆ ಕಂಟಕವಾಗಿದೆ. ಎಲ್ಲರೂ ಕೂಡ ಸ್ವಲ್ಪ ಸಹಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಕಾರ್ಮಿಕರಿಗೆ ಉಚಿತ ಪ್ರಯಾಣ ಅಸಾಧ್ಯ ಎಂದರು.
ಮೇ 4ರಿಂದ ಕೊರೊನಾ ಹಾಟ್‌ಸ್ಪಾಟ್ ತಾಲೂಕು ಹೊರತುಪಡಿಸಿ ಇತರೆಡೆ ಸಾರಿಗೆ ಸಂಚಾರ ಆರಂಭವಾಗಲಿದೆ. ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ಸಾರಿಗೆ ಸಂಚಾರ ನಡೆಯಲಿದೆ. ಹೊರ ರಾಜ್ಯಗಳ ಕಾರ್ಮಿಕರನ್ನು ರಾಜ್ಯಕ್ಕೆ ಕರೆ ತಂದ ಮೇಲೆ ಕ್ವಾರಂಟೈನ್‌ನಲ್ಲಿ ಇರಿಸಬೇಕಾಗುತ್ತೆ. ಈ ಕುರಿತು ಇನ್ನೆರಡು ದಿನಗಳಲ್ಲಿ ನಿರ್ಧರಿಸಲಾಗುವುದು ಎಂದರು.