ಚಿಕ್ಕೋಡಿ: ನಾಳೆ ಸಿಎಂ ಬೊಮ್ಮಾಯಿ ಅವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲು ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಹಾಕಿದ್ದ ರಸ್ತೆ ತಡೆಗಳನ್ನು (ಹಂಪ್ಸ್) ಅಧಿಕಾರಿಗಳು ತೆರವು ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕೋಡಿ ವಿಭಾಗದ ಹುಕ್ಕೇರಿ ಪಟ್ಟಣ ಮತ್ತು ಸಂಕೇಶ್ವರದಲ್ಲಿ ನೂತನವಾಗಿ ನಿರ್ಮಿಸಿರುವ ಬಸ್ ನಿಲ್ದಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಿಎಂ ಬೊಮ್ಮಾಯಿ, ಸಾರಿಗೆ ಇಲಾಖೆ ಸಚಿವ ಶ್ರೀರಾಮುಲು ಆಗಮಿಸುತ್ತಿದ್ದಾರೆ. ಹೀಗಾಗಿ ಸಿಎಂ ಸಂಚಾರ ಮಾಡುವ ರಸ್ತೆಯಲ್ಲಿ ಹಾಕಲಾಗಿದ್ದ ರಸ್ತೆ ಹಂಪ್ಸ್ಗಳನ್ನು ತೆರವು ಮಾಡಿದ್ದಾರೆ. ಇದಕ್ಕೆ ಜನಸಾಮಾನ್ಯರಿಗೆ ಒಂದು ನ್ಯಾಯ, ಸಿಎಂ ಹಾಗೂ ಸಚಿವರಿಗೆ ಒಂದು ನ್ಯಾಯ ಎಂದು ಜನರು ಪ್ರಶ್ನಿಸಿದ್ದಾರೆ.
ಸಂಕೇಶ್ವರ, ಹುಕ್ಕೇರಿ, ಬಡಕುಂದ್ರಿ ಮಾರ್ಗದಲ್ಲಿ ಬರುವ ಶಾಲಾ-ಕಾಲೇಜುಗಳ ಬಳಿ ಅಳವಡಿಸಿರುವ 50ಕ್ಕೂ ಹೆಚ್ಚು ರಸ್ತೆ ಹಂಪ್ಸ್ ತೆರವು ಮಾಡಿದ್ದಾರೆ. ನಿನ್ನೆಯಿಂದ ರಸ್ತೆಯಲ್ಲಿ ಹಾಕಲಾಗಿದ್ದ ಸ್ಪೀಡ್ ಬ್ರೇಕರ್ಗಳನ್ನು ಲೋಕೋಪಯೋಗಿ ಇಲಾಖೆ ತೆರವುಗೊಳಿಸಿದೆ. ಇದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಒಂದೊಳ್ಳೆ ಉದ್ದೇಶಕ್ಕೆ ನಾವು ಜಮೀನು ನೀಡುತ್ತಿದ್ದೇವೆ.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ