ಚಿಕ್ಕೋಡಿ/ಹಾವೇರಿ: ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಕಳೆದ ಒಂದು ಗಂಟೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪ್ರಯಾಣಿಕರು ಪರದಾಟ ನಡೆಸುತ್ತಿದ್ದು, ಮಳೆಯಿಂದ ಪಟ್ಟಣದ ಚರಂಡಿಗಳು ತುಂಬಿ ಹರಿಯುತ್ತಿವೆ.
ಕಳೆದ ಎರಡು ದಿನಗಳ ಹಿಂದೆ ಹುಕ್ಕೇರಿ ಪಟ್ಟಣದಲ್ಲಿ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಮನೆಗಳು ಬಿದ್ದಿದ್ದು, ಓರ್ವ ಸಾವನಪ್ಪಿ ಇಬ್ಬರು ಸಾವಿನ ದವಡೆಯಿಂದ ಪಾರಾಗಿದ್ದರು. ಇಂದು ಮತ್ತೆ ಧಾರಾಕಾರ ಮಳೆಯಿಂದ ಹುಕ್ಕೇರಿ ಪಟ್ಟಣದ ಜನರು ಆತಂಕದಲ್ಲಿದ್ದಾರೆ.
ಹಾವೇರಿ ಜಿಲ್ಲಾದ್ಯಂತ ಭಾರಿ ಮಳೆ:
ಜಿಲ್ಲಾಕೇಂದ್ರ ಹಾವೇರಿಯಲ್ಲಿ ಮಂಗಳವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ಮಳೆಯಿಂದಾಗಿ ಕೆಲಕಾಲ ಜನಜೀವನ ಅಸ್ತವ್ಯಸ್ತವಾಗಿತ್ತು. ರೈಲ್ವೆ ಕೇಳಸೇತುವೆಯಲ್ಲಿ ನೀರು ನಿಂತಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು. ಚರಂಡಿಗಳು ತುಂಬಿ ಮಳೆನೀರು ರಸ್ತೆ ಮೇಲೆ ಹರಿದ ಕಾರಣ ಪಾದಚಾರಿಗಳು ಪರದಾಡಿದರು. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಮಳೆಯಾಗುತ್ತಿರುವುದು ರೈತರಿಗೆ ಆತಂಕ ತಂದಿದೆ. ಸೋಯಾಬಿನ್, ಶೇಂಗಾ ಮತ್ತು ಮೆಕ್ಕೆಜೋಳ ಬೆಳೆಗಳು ಒಕ್ಕಣೆಗೆ ಬಂದಿದ್ದು, ಮಳೆಯಿಂದ ಹಾನಿಯಾಗುವ ಆತಂಕವನ್ನ ರೈತರು ವ್ಯಕ್ತಪಡಿಸಿದರು.