ಬೆಳಗಾವಿ/ಚಿಕ್ಕೋಡಿ: ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಸಹೋದರರಿಬ್ಬರು ಮಹಾಮಾರಿ ಕೊರೊನಾಗೆ ಬಲಿಯಾಗಿರುವ ಘಟನೆ ತೋಪಿನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಗರ್ಲಜುಂಜಿಯ ಗ್ರಾಮದ ಪಿ.ಕೆ ಕುಂಬಾರ ಹಾಗೂ ಅವರ ತಮ್ಮ ನಾರಾಯಣ್ ಕೆ.ಕುಂಬಾರ ಮೃತರು. ಈ ಇಬ್ಬರು ಸಹೋದರರು ತೋಪಿನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳಿಂದ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ತಮ್ಮನಾದ ನಾರಾಯಣ್ ಕೆ.ಕುಂಬಾರಗೆ ಕಳೆದ ಹತ್ತು ದಿನಗಳ ಹಿಂದೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಇದಾದ ಬಳಿಕ ಆತನಿಂದ ಅಣ್ಣನಿಗೆ ಸೋಂಕು ತಗುಲಿ ಇಬ್ಬರು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಕಳೆದ ನಾಲ್ಕು ದಿನಗಳ ಹಿಂದೆ ಪಿ.ಕೆ ಕುಂಬಾರ್ ಹಾಗೂ ಎರಡು ದಿನಗಳ ಹಿಂದೆ ನಾರಾಯಣ್ ಕುಂಬಾರ್ ಕೊನೆಯುಸಿರೆಳೆದರು. ಸಹೋದರರಿಬ್ಬರನ್ನು ಕಳೆದುಕೊಂಡು ಕುಟುಂಬ ಅನಾಥವಾಗಿದೆ.
ಅನುದಾನಿತ ಶಾಲೆಯ ಶಿಕ್ಷಕ ಸಾವು: ಇನ್ನೋರ್ವ ಅನುದಾನಿತ ಶಾಲೆಯ ಶಿಕ್ಷಕ ಕೋವಿಡ್ ಸೋಂಕಿನಿಂದ ನಿಪ್ಪಾಣಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದ ನಿವಾಸಿ ಸಂಜಯ ಶ್ರೀಧರ ಮಾಳಗಿ (45) ಮೃತ ಶಿಕ್ಷಕ. ಇವರು ಕಾಗವಾಡ ತಾಲೂಕಿನ ಮೋಳೆ ಗ್ರಾಮದ ಶ್ರೀ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಶಿಕ್ಷಕನ ಅಗಲಿಕೆಗೆ ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.