ಬೆಳಗಾವಿ: ವರುಣನ ಆರ್ಭಟಕ್ಕೆ ಕುಂದಾನಗರಿ ತಲ್ಲಣಿಸಿದೆ. ನಾಲೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು ಬಸವಣ ಕುಡಚಿ ಸೇರಿದಂತೆ ಇತರ ಗ್ರಾಮಗಳಲ್ಲಿ ಬೆಳೆದ ಬೆಳೆಗಳು ನೀರಿನಲ್ಲಿ ಮುಳುಗಿವೆ.
ಬಳ್ಳಾರಿಯ ನಾಲೆಗಳ ನೀರಿನ ಒಳಹರಿವು ಹೆಚ್ಚಾಗಿದ್ದು ಆನಗೋಳ, ವಡಗಾವಿ, ಅನ್ನಪೂರ್ಣೇಶ್ವರಿ ಕಾಲೋನಿ ಹಾಗೂ ಮಾರುತಿ ನಗರದ ಮನೆಗೆಳಿಗೆ ನೀರು ನುಗ್ಗಿದೆ. ಪರಿಣಾಮ, ನಿವಾಸಿಗಳು ಮನೆಯೊಳಗಿನ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಸ್ಥಳೀಯ ನಿವಾಸಿ ಸ್ಮಿತಾ ಚೌಗಲೆ, ಕಳೆದ 20 ವರ್ಷಗಳಿಂದ ಪ್ರತಿವರ್ಷ ಮಳೆಗಾಲದಲ್ಲಿ ನಮ್ಮನ್ನು ಇದೇ ಸಮಸ್ಯೆ ಕಾಡುತ್ತಿದೆ. ಮಳೆಗಾಲ ಮುಗಿದ ನಂತರ ಈ ಮನೆಗಳನ್ನು ದುರಸ್ಥಿ ಮಾಡುವುದರಲ್ಲಿಯೇ ನಮ್ಮ ಜೀವನ ಕಳೆದು ಹೋಗುತ್ತಿದೆ. ಹೀಗಾಗಿ ಸಂಬಂಧಿಸಿದ ಶಾಸಕರು, ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಮಳೆಯಿಂದ ಬೆಳೆ ನಾಶ:
ಮಳೆಯಿಂದಾಗಿ ಜಿಲ್ಲೆಯಲ್ಲಿನ ಬಹುತೇಕ ನಾಲೆಗಳು ತುಂಬಿ ಹರಿಯುತ್ತಿರುವುದರಿಂದ ತಾಲೂಕಿನ ಕೆಲ ಗ್ರಾಮಗಳಲ್ಲಿ ಹೊಲಗದ್ದೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಲಾರಂಭಿಸಿದೆ. ಇದರಿಂದಾಗಿ ಬಸವನ ಕುಡಚಿ, ಕಡೋಲಿ, ಕಾಕತಿ, ಉಚಗಾಂವ ಸೇರಿದಂತೆ ಇತರ ಗ್ರಾಮಗಳ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆಗಳು ನೀರು ಪಾಲಾಗಿವೆ.
ಮುಂಗಾರಿನಲ್ಲಿ ನಾಟಿ ಮಾಡಿದ ಭತ್ತ, ಕಬ್ಬು, ಶೇಂಗಾ, ಹೆಸರು ಹಾಗೂ ತರಕಾರಿ ಬೆಳೆಗಳು ಅಪಾರ ಪ್ರಮಾಣದಲ್ಲಿ ನಾಶವಾಗಿವೆ.