ಬೆಳಗಾವಿ : ಸಹೋದರ ಲಖನ್ ಕಾಂಗ್ರೆಸ್ ಬಿಟ್ಟು ಬಿಜೆಪಿ ಬೆಂಬಲಿಸಿದ್ರೆ ನನಗೇನೂ ನಷ್ಟ ಆಗಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಗೋಕಾಕಿನ ಲಖನ್ ಜಾರಕಿಹೊಳಿ ಮನೆಗೆ ಜಗದೀಶ್ ಶೆಟ್ಟರ್ ಸೇರಿ ಬಿಜೆಪಿಯ ನಾಯಕರು ಭೇಟಿ ನೀಡಿದ ವಿಚಾರಕ್ಕೆ ಬೆಳಗಾವಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನನ್ನು ಹಲವು ಬಿಜೆಪಿ ನಾಯಕರು ಭೇಟಿಯಾಗ್ತಾರೆ, ಅದರಲ್ಲೇನು ವಿಶೇಷ? ಲಖನ್ ಬಿಜೆಪಿಗೆ ಬೆಂಬಲ ಕೊಟ್ಟರೆ ಅದು ಅವರ ವೈಯಕ್ತಿಕ ವಿಚಾರ.
ನನಗೂ ದಿನಾಲೂ ಬಿಜೆಪಿ ನಾಯಕರು ಭೇಟಿ ಆಗುತ್ತಾರೆ. ಬೆಂಬಲ ಕೊಡೋದು ಬೇರೆ, ಭೇಟಿಯಾಗೋದು ಬೇರೆ. ಒಬ್ಬರು ಹೋಗ್ತಾರೆ, ಒಬ್ಬರು ಬರ್ತಾರೆ, ರಾಜಕೀಯದಲ್ಲಿ ಇದೆಲ್ಲ ಸಹಜ. ಹೋದವರ ಜೊತೆಗೆ ಕೆಲವು ಮತ ಹೋಗುತ್ತವೆ. ಬಂದವರ ಜೊತೆಗೆ ಕೆಲವು ಮತಗಳು ಬರುತ್ತವೆ.
ಪಕ್ಷದ ಮತಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಮತ ಎಷ್ಟು ಅಂತ ತೋರಿಸಿದ್ದೇವೆ. ಮತಗಳ ಸಂಖ್ಯೆಯಲ್ಲಿ ಕಡಿಮೆ ಆಗಲು ಸಾಧ್ಯವಿಲ್ಲ ಎಂದರು. ಬಿಜೆಪಿ ನಾಯಕರ ಟೀಕೆಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಉಪಚುನಾವಣೆಯಲ್ಲಿ ನನಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ನನ್ನ ಗೆಲುವು ಶತಃಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.