ಬೆಳಗಾವಿ: ದೇವಸ್ಥಾನದಲ್ಲಿ ಯಾರೂ ಇಲ್ಲದ ವೇಳೆ ಕೀಲಿ ಮುರಿದು ದೇವರ ಆಭರಣಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೋರ್ವನನ್ನು ಘಟಪ್ರಭಾ ಪೊಲೀಸರು ಬಂಧನ ಮಾಡಿದ ಘಟನೆ ನಡೆದಿದೆ.
ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ನಿವಾಸಿ ಲಕ್ಕಪ್ಪ ನಾಯ್ಕ (26) ಬಂಧಿತ ಆರೋಪಿ. ಈತ ಇತ್ತಿಚೆಗೆ ರಾಜಾಪೂರ ಗ್ರಾಮದಲ್ಲಿ ಶ್ರೀ ಯಲ್ಲಮ್ಮ ದೇವಸ್ಥಾನದ ಬಾಗಿಲನ್ನು ಮುರಿದು ದೇವಿಯ ಮೈಮೇಲಿರುವ ಅಂದಾಜು 92500/- ಮೊತ್ತದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಕಳ್ಳತನವಾಗಿರುವ ಕುರಿತು ಮಾ.18ರಂದು ಪ್ರಕರಣ ದಾಖಲಿಸಿಕೊಂಡ ಘಟಪ್ರಭಾ ಪೊಲೀಸರು ಕೇವಲ ಒಂದು ದಿನದ ಅವಧಿಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಎಸ್ಪಿ, ಡಿಎಸ್ಪಿ ಮಾರ್ಗದರ್ಶನದಲ್ಲಿ ಘಟಪ್ರಭಾ ಪಿಎಸ್ಐ ಹೆಚ್. ವೈ.ಬಾಲದಂಡಿ ಹಾಗೂ ಸಿಬ್ಬಂದಿಗಳ ಸಹಾಯದೊಂದಿಗೆ ಮೂಡಲಗಿ ಸಿಪಿಐ ವಿ. ಎಸ್ .ಮುರನಾಳ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆತ ಕಳ್ಳತನ ಮಾಡಿದ್ದ ಬಂಗಾರ, ಬೆಳ್ಳಿಯ ಆಭರಣಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಇನ್ನು ಘಟಪ್ರಭಾ ಪೊಲೀಸರ ಕಾರ್ಯಕ್ಕೆ ಎಸ್ಪಿ ಅಭಿನಂದನೆ ಸಲ್ಲಿಸಿದ್ದಾರೆ.