ಚಿಕ್ಕೋಡಿ : 15 ವರ್ಷದ ಹಿಂದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹತ್ಯೆ ಸ್ಕೆಚ್ ಹಾಕಿದ ಮಾಹಿತಿಯೊಂದು ಸದ್ಯ ಬೆಳಕಿಗೆ ಬಂದಿದೆ. ಈ ವಿಷಯವಾಗಿ ಸತೀಶ್ ಜಾರಕಿಹೊಳಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದು, ನನ್ನ ಕೊಲೆ ಮಾಡಲು ಸ್ಕೆಚ್ ಮಾಡಿದ್ದರಂತೆ. ಆಗಿನ ಪೊಲೀಸರು ಹೇಳುತ್ತಿದ್ರು. ಈಗಿನ ಗ್ಯಾಂಗ್ ಹಣ ವಸೂಲಿ ಮಾಡುವ ಕೆಲಸ ಮಾತ್ರ ಮಾಡುತ್ತಾರೆ ಎಂದು ಹೇಳಿದರು.
ರಾಜಕೀಯ ಕುಮ್ಮಕ್ಕು ಏನೂ ಇಲ್ಲ ಸ್ವಯಂ ಪ್ರೇರಿತವಾಗಿ ಟೈಗರ್ ಗ್ಯಾಂಗ್‌ನವರು ಕೆಲಸ ಮಾಡುತ್ತಾರೆ. ಇವರು ಮೊದಲಿನಿಂದಲೂ ಮಾಡುತ್ತಿದ್ದಾರೆ. ಇದೇನು ಹೊಸದಲ್ಲ. ಸುಮಾರು 20 ವರ್ಷದಿಂದ ಆ್ಯಕ್ಟೀವ್ ಆಗಿದ್ದಾರೆ. ಈ ಬಗ್ಗೆ ಮೊದಲೇ ತನಿಖೆ ಮಾಡಬೇಕಿತ್ತು. ಆದರೆ, ಈಗ ತನಿಖೆ ಮಾಡುತ್ತಿದ್ದಾರೆ. ಈ ಸ್ಕೆಚ್ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಪೊಲೀಸರು ಸಹ ಹೇಳಿದ್ದರು ಎಂದು ಸತೀಶ ಜಾರಕಿಹೊಳಿ ಹೇಳಿಕೊಂಡಿದ್ದಾರೆ.
ಯಾವುದು ಈ ಗ್ಯಾಂಗ್?: ಬೆಳಗಾವಿ ಜಿಲ್ಲೆ ಗೋಕಾಕ್ನಲ್ಲಿ ಭೂಗತ ಲೋಕವೊಂದು ಯಾರಿಗೂ ಗೊತ್ತಿಲ್ಲದೆ ಬೆಳೆದು ಹೆಮ್ಮರವಾಗಿತ್ತು. ಸದ್ಯ ಗೋಕಾಕ್ನ ದಲಿತ ಯುವಕನ ಹತ್ಯೆಯಲ್ಲಿ ತನ್ನ ನೇರ ಪಾಲುದಾರಿಕೆಯನ್ನ ಹೊತ್ತಿರುವ ಆ ಗ್ಯಾಂಗ್, ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಈಗ ಮುದ್ದೆ ಮುರಿಯುತ್ತಿದೆ. ಕೊಲೆ ಆರೋಪ ಎದುರಿಸುತ್ತಿರುವ 9 ಗೋಕಾಕ್ನ ಯುವಕರನ್ನು ಬೆಳಗಾವಿ ಪೊಲೀಸರು ಹೆಡೆಮುರಿ ಕಟ್ಟಿ ಸದ್ಯ ನ್ಯಾಯಾಂಗ ಬಂಧನದಲ್ಲಿಟ್ಟಿದ್ದಾರೆ. ಆದರೆ, ಇವರು 15 ವರ್ಷದ ಹಿಂದೆ ಮಾಡಿದ ಪ್ಲಾನ್ ಈಗ ಹೊರಬಿದ್ದಿದೆ.
ಈ ಗ್ಯಾಂಗ್ನ ಪ್ರಮುಖ ಸಂಸ್ಥಾಪಕ ನಾಗರಾಜ್ ಜಂಬಗಿ ಎನ್ನುವ ಆರೋಪಿ ಬಾಗಲಕೋಟೆಯ ಜೈಲಿನಲ್ಲಿದ್ದುಕೊಂಡೇ ಸತೀಶ್ ಜಾರಕಿಹೊಳಿ ಹತ್ಯೆಗೆ ಸಂಚು ರೂಪಿಸಿದ್ದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಮರೆಗುಳಿ ಸ್ವಭಾವ ಹೊಂದಿದ್ದ ನಾಗರಾಜ ಜಂಬಗಿ, ತಾನು ಮಾಡಬೇಕಾದ ಕೆಲಸದ ಬಗ್ಗೆ ದಿನ ಡೈರಿ ಬರೆಯುವ ಅಭ್ಯಾಸ ಇಟ್ಟುಕೊಂಡಿದ್ದ ಎಂದು ತಿಳಿದು ಬಂದಿದೆ. ಆ ಡೈರಿಯಲ್ಲಿ ಕಳೆದ 15 ವರ್ಷದ ಹಿಂದೆಯೇ ಸತೀಶ್ ಜಾರಕಿಹೊಳಿ ಹತ್ಯೆಯ ಸಂಚು ಬಯಲಾಗಿತ್ತು.
ದೊಡ್ಡ ಮಟ್ಟದ ಜನರನ್ನೇ ಟಾರ್ಗೇಟ್ ಮಾಡಿಕೊಂಡು ಬ್ಲಾಕ್‌ಮೇಲ್ ಹಾಗೂ ಕೊಲೆ ಬೆದರಿಕೆ ಮಾಡುತ್ತಿದ್ದ ಗ್ಯಾಂಗ್ ಸದ್ಯ ಪೊಲೀಸರ ಅತಿಥಿಯಾಗಿದೆ. ಗೋಕಾಕ್ ನಗರದಲ್ಲಿ ಈ ಗ್ಯಾಂಗ್ಗೆ ಸಂಬಂಧಪಟ್ಟವರ ಮನೆಗೆ ಸರ್ಚ್ ವಾರಂಟ್ ಹಿಡಿದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.