ಬೆಳಗಾವಿ: ಸವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ರಸ್ತೆಯ ಶಾಂತಿ ನಗರದ ಬಳಿಯ ನಿರ್ಜನ ಗುಡ್ಡಗಾಡು ಪ್ರದೇಶದಲ್ಲಿ ಬೈಕ್ ಅಡ್ಡಗಟ್ಟಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಡಕಾಯಿತಿ ಗ್ಯಾಂಗ್ನ ಖದೀಮರನ್ನು ಹೆಡೆಮುರಿಕಟ್ಟುವಲ್ಲಿ ಬೆಳಗಾವಿಯ ಸವದತ್ತಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸವದತ್ತಿಯ ಶಾಂತಿ ನಗರದ ಮಹಮ್ಮದ್ ಇಮಾಮಸಾಬ್ ಕಲ್ಲೇದ್, ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಮುತ್ತಣ್ಣ ಯಲ್ಲಪ್ಪ ಗುತ್ತೇದಾರ, ಕೊಪ್ಪಳ ಜಿಲ್ಲೆಯ ತೊಗ್ಗಲಡೋಣಿಯ ಲಾಲಸಾಬ್ ದಾವಲಸಾಬ್ ರಾಂಪೂರ, ಸವದತ್ತಿ ಶಾಂತಿ ನಗರದ ಇಬ್ರಾಹಿಂ ಅಕ್ಬರ್ ಕುಡಚಿ ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಬಂಧಿತ ಆರೋಪಿಗಳು.
ಬೈಕ್ ಅಡ್ಡ ಗಟ್ಟಿ ಚಿನ್ನಾಭರಣ ದೋಚಿದ್ದ ಆರೋಪಿಗಳು: ಈ ಪ್ರಕರಣದ ಸಂಬಂಧ ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್, ''ಕಳೆದ ಆಗಸ್ಟ್ 24 ರಂದು ಸವದತ್ತಿ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಸವದತ್ತಿ ತಾಲೂಕಿನ ಯಲಮ್ಮನ ಗುಡ್ಡದ ರಸ್ತೆಯ ಶಾಂತಿ ನಗರದ ಹತ್ತಿರ ದರೋಡೆ ಆಗಿತ್ತು. ಸವದತ್ತಿಯ ಅಶೋಕ ಬಸಪ್ಪ ಬಾಗೇವಾಡಿ ಎಂಬವರ ಬೈಕ್ ಅಡ್ಡ ಗಟ್ಟಿ ಚಿನ್ನಾಭರಣ ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಈ ಕುರಿತು ಬೈಕ್ ಸವಾರ ಅಶೋಕ ಬಾಗೇವಾಡಿ ದೂರು ನೀಡಿದ್ದರು. ಹಿಂದಿನ ಸಿಪಿಐ ಕರುಣೇಶಗೌಡ, ಈಗಿನ ಸಿಪಿಐ ಧರ್ಮಾಕರ್ ದರ್ಮಟ್ಟಿ ನೇತೃತ್ವದಲ್ಲಿ ತನಿಖೆ ನಡೆಸಿ ಪ್ರಕರಣ ಭೇದಿಸಲಾಗಿದೆ. ಅಲ್ಲದೇ ಇದು ದರೋಡೆ ಪ್ರಕರಣವಲ್ಲ ಡಕಾಯಿತಿ ಪ್ರಕರಣ ಅಂತಾ ಪೊಲೀಸರು ನಿರೂಪಿಸಿದ್ದಾರೆ'' ಎಂದು ಎಸ್ಪಿ ಮಾಹಿತಿ ನೀಡಿದರು.
ಆರೋಪಿಗಳಿಂದ 8.68 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಜಪ್ತಿ: ದೂರು ನೀಡಿದಾಗ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಸದ್ಯ ಡಕಾಯಿತಿ ಪ್ರಕರಣದಲ್ಲಿ ಓರ್ವ ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿ ಐವರು ಆರೋಪಿಗಳು ಭಾಗಿಯಾಗಿದ್ದರು. ಈಗಾಗಲೇ ನಾಲ್ಕು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ. ಕಾನೂನಿನ ಸಂಘರ್ಷಕ್ಕೆ ಒಳಗಾಗಿದ್ದ ಬಾಲಕನನ್ನು ಬಾಲ ನ್ಯಾಯ ಮಂಡಳಿಗೆ ಒಪ್ಪಿಸಿದ್ದೇವೆ. ಬಂಧಿತರಿಂದ ಚಿನ್ನದ ಕೈಗಡಗ, ಚೈನು, ಮೊಬೈಲ್, ಬೈಕ್ ಜಪ್ತಿ ಮಾಡಲಾಗಿದೆ. 8 ಲಕ್ಷ 68 ಸಾವಿರ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಆರೋಪಿಗಳಿಂದ ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದರು.
ಇದನ್ನೂ ಓದಿ: 36 ಗಂಟೆಗೂ ಮೊದಲು ಉಸಿರುಗಟ್ಟಿಸಿ ಮಗುವಿನ ಕೊಲೆ: ಶವಪರೀಕ್ಷೆ ವರದಿಯಲ್ಲಿ ಬಹಿರಂಗ