ಬೆಂಗಳೂರು : ನಗರದಲ್ಲಿ ದಿನೇದಿನೆ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಒಂದೇ ದಿನದ ಅಂತರದಲ್ಲಿ ಕೊರೊನಾ ಸಂಖ್ಯೆ 565 ರಿಂದ 656ಕ್ಕೆ ಏರಿಕೆಯಾಗಿದೆ. ಈ ಕುರಿತಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿವೆ. ಎಲ್ಲರೂ ಆದಷ್ಟು ಎಚ್ಚರಿಕೆಯಿಂದ ಇರಬೇಕು. ಸೋಂಕಿನ ಲಕ್ಷಣ ಬಂದ ಕೂಡಲೇ ಪರೀಕ್ಷಿಸಿ ಪ್ರತ್ಯೇಕವಾಗಿದ್ದುಕೊಂಡು ಇತರರಿಗೆ ಹರಡದಂತೆ ನೋಡಿಕೊಳ್ಳಬೇಕು. ದಿನಕ್ಕೆ 50 ಸಾವಿರ ಪರೀಕ್ಷೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ 60 ಸಾವಿರಕ್ಕೆ ಏರಿಕೆ ಮಾಡಲಾಗುವುದು ಎಂದರು.
ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಎಲ್ಲಿ ಹೆಚ್ಚಿದೆಯೋ ಅಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಮಹದೇವಪುರ, ಬೊಮ್ಮನಹಳ್ಳಿ, ಯಲಹಂಕ ಹಾಗೂ ಪೂರ್ವ ವಲಯದ ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರಕರಣ ಹೆಚ್ಚಾಗುತ್ತಿದೆ.
ಪ್ರತಿನಿತ್ಯ ಒಂದೊಂದು ಅಪಾರ್ಟ್ಮೆಂಟಿನಲ್ಲೂ 3ರಿಂದ 4 ಪ್ರಕರಣ ಕಂಡು ಬರುತ್ತಿವೆ. ಇಲ್ಲೆಲ್ಲ ಕಂಟೈನ್ಮೆಂಟ್ ಮಾಡಲಾಗುತ್ತಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಟೆಸ್ಟಿಂಗ್ ಕೂಡ ನಡೆದಿದೆ. ಪಾಸಿಟಿವ್ ಬಂದವರ ಜೀನೋಮ್ ಸೀಕ್ವೆನ್ಸಿಂಗ್ ಪತ್ತೆ ಮಾಡಲಾಗುತ್ತಿದೆ. ಹೊಸ ವರ್ಷಾಚರಣೆಗೆ ಅಪಾರ್ಟ್ಮೆಂಟ್ಗಳಿಗೆ ನಿರ್ಬಂಧ ಹೇರಲಾಗಿದೆ. ಸೋಂಕು ಹರಡದಂತೆ ನೈಟ್ ಕರ್ಫ್ಯೂ, ಸಾರ್ವಜನಿಕ ಸ್ಥಳಗಳಲ್ಲಿ ನಿರ್ಬಂಧಗಳು ಅತ್ಯಗತ್ಯ ಎಂದರು.
ಮಕ್ಕಳಿಗೆ ಲಸಿಕೆಯನ್ನು ಶಾಲೆಗಳಲ್ಲೇ ನೀಡಲು ಸಿದ್ಧತೆ : ಜನವರಿ 3ರಿಂದ ಮಕ್ಕಳಿಗೆ ಲಸಿಕೆ ಆರಂಭವಾಗಲಿದೆ. ಬಿಬಿಎಂಪಿ, ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಲ್ಲಿ 15 ವರ್ಷ ಮೇಲ್ಪಟ್ಟವರಿಗೆ ಶಾಲೆಗಳಲ್ಲಿ ಕೊಡಲಾಗುವುದು. ಅದಕ್ಕೆ ಸಿಎಂ ಚಾಲನೆ ಕೊಡಲಿದ್ದಾರೆ. ಶಾಲೆಗೆ ಹೋಗದಿರುವ ಮಕ್ಕಳಿಗೂ ಲಸಿಕೆ ಕೊಡಲಾಗುವುದು. ಶಿಕ್ಷಣ ಇಲಾಖೆಯಿಂದ ಈಗಾಗಲೇ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳುವ ಕುರಿತು ನಿರ್ದೇಶನಗಳು ಹೋಗಿವೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಹೊಸ ವರ್ಷದ ಬಂಪರ್ ಕೊಡುಗೆ ನೀಡಿದ ಸಚಿವ ನಿರಾಣಿ