ಬೆಳಗಾವಿ: ಮುಖ್ಯಮಂತ್ರಿಗೆ ಘೇರಾವ್ ಹಾಕಲು ಬಂದಿದ್ದ ರೈತರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿಯ ಪ್ರವಾಸಿ ಮಂದಿರದ ಬಳಿ ನಡೆದಿದೆ.
ಪ್ರವಾಹಕ್ಕೆ ನಾಶವಾದ ಬೆಳೆಗೆ ಪರಿಹಾರ ನೀಡುವಂತೆ ರೈತರ ನಿಯೋಗ ನಿನ್ನೆ ಸಿಎಂ ಯಡಿಯೂರಪ್ಪ ಅವರನ್ನ ಭೇಟಿ ಮಾಡಿತ್ತು. ರೈತರಿಗೆ ಸಿಎಂ ಕಡೆಯಿಂದ ಸಮರ್ಪಕ ಸ್ಪಂದನೆ ಸಿಕ್ಕಿರಲಿಲ್ಲ. ಹೀಗಾಗಿ ಸಿಎಂ ಹೋದಲೆಲ್ಲ ಘೇರಾವ್ ಹಾಕಲು ರೈತರು ನಿನ್ನೆಯೇ ತೀರ್ಮಾನಿಸಿದ್ದರು. ಸಾರ್ವಜನಿಕ ಅಹವಾಲು ಸ್ವೀಕಾರ ಬಳಿಕ ಸಿಎಂ ಅಥಣಿ ತಾಲೂಕಿಗೆ ಪ್ರಯಾಣ ಬೆಳೆಸುವ ವೇಳೆ ಪ್ರವಾಸಿ ಮಂದಿರದ ಗೇಟ್ ಬಳಿ ಅವರ ಕಾರಿಗೆ ಅಡ್ಡಲಾಗಿ ಮಲಗಿ ರೈತರು ಪ್ರತಿಭಟಿಸಲು ಮುಂದಾದರು. ಆಗ ರೈತರನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ. ಸಿಎಂ ಕಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಲು ಮುಂದಾದ ರೈತ ನಾಯಕಿ ಜಯಶ್ರೀ ಅವರನ್ನೂ ಮಹಿಳಾ ಪೊಲೀಸರು ಎಳೆದಾಡಿದರು. ಈ ವೇಳೆ ಪೊಲೀಸರ ವಿರುದ್ಧ ಜಯಶ್ರೀ ಅವರು ಕಿಡಿಕಾರಿದರು.
ಸಿಎಂ ವಾಹನಕ್ಕೆ ರೈತರು ಮುತ್ತಿಗೆ ಹಾಕುತ್ತಿದ್ದಂತೆ ರೈತರನ್ನು ಎಳೆದಾಡಿ ಪೊಲೀಸರು ಬಂಧಿಸಿ ನಂತರ ಎಪಿಎಂಸಿ ಠಾಣೆಗೆ ಕರೆತಂದರು. ಎಪಿಎಂಸಿ ಠಾಣೆಯಲ್ಲಿರುವ ರೈತರು ಸಿಎಂ ಹಾಗೂ ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲ, ಠಾಣೆಯೊಳಗೆ ರೈತರು ಲಬೋಲಬೋ ಅಂತಾ ಬಾಯಿ ಬಾಯಿ ಬಡಿದುಕೊಂಡರು.